ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಪ್ರಕರಣ: ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಸಿಬಿಐ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ.

ನ್ಯಾ.ಕೆ ಸೋಮಶೇಖರ್‌ ಮತ್ತು ನ್ಯಾ. ಉಮೇಶ್‌ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದೆ.

ಬಿಐ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿ, ನಿರ್ದಿಷ್ಟ ಒಪ್ಪಿಗೆ ಮತ್ತು ಸಾಮಾನ್ಯ ಒಪ್ಪಿಗೆಯ ಬಗ್ಗೆ ಸಂವಿಧಾನದ 131ನೇ ವಿಧಿಗೆ ಸಂಬಂಧಿಸಿದ ಮಾಹಿತಿ ದಾಖಲೆ ಸಲ್ಲಿಸಲಾಗಿದೆ. ಡಿಕೆಶಿ ಎಫ್‌ಐಆರ್‌ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಈ ಪ್ರಕರಣಕ್ಕೆ ಸಂವಿಧಾನದ 131ನೇ ವಿಧಿ ಅನ್ವಯಿಸುವುದಿಲ್ಲ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈಗ ಸರ್ಕಾರ ಒಪ್ಪಿಗೆ ಹಿಂಪಡೆದಿದೆ. ಇನ್ನು ಎಫ್‌ಐಆರ್‌ ಏನಾಗಲಿದೆ ಎಂಬ ಪ್ರಶ್ನೆ ಹೈಕೋರ್ಟ್‌ ಮುಂದಿದೆ. ಅಗತ್ಯವಾದ ಎಲ್ಲರೂ ನ್ಯಾಯಾಲಯದ ಮುಂದೆ ಇದ್ದಾರೆ. ಇಲ್ಲಿ ಔಪಚಾರಿಕ ಪಕ್ಷಕಾರರು ಸಹ ಇಲ್ಲ. ಹೀಗಾಗಿ ಸಂವಿಧಾನದ 131ನೇ ವಿಧಿ ಅನ್ವಯಿಸಲ್ಲ ಎಂದು ತಿಳಿಸಿದರು.

ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ‌ ವಾದ ಮಂಡಿಸಿ, ಆರ್ಟಿಕಲ್ 131 ರಾಜ್ಯಕ್ಕೆ ಅನ್ವಯ ಆಗುತ್ತದೆ, ಒಬ್ಬ ವ್ಯಕ್ತಿಗೆ ಅಲ್ಲ. ಇಲ್ಲಿ ರಾಜ್ಯ ಸರ್ಕಾರ ಪ್ರಕರಣ ವಾಪಸ್‌ ಪಡೆದಿರುವುದು ಕಾನೂನು ಬಾಹಿರ. ಸರ್ಕಾರ ಇದನ್ನು ಲೋಕಾಯುಕ್ತಕ್ಕೆ ನೀಡಿದೆ. ಮತ್ತೊಂದೆಡೆ ಸಿಬಿಐ ಎಫ್ಐಆರ್ ಸಹ ಇನ್ನೂ ಹಾಗೇ ಇದೆ. ಒಮ್ಮೆ ಸಿಬಿಐ ಎಫ್ಐಆರ್ ರಿಜಿಸ್ಟರ್ ಮಾಡಿದರೆ ಕೇಂದ್ರ ಸರ್ಕಾರಕ್ಕೂ ವಾಪಸ್‌ ಪಡೆಯಲು‌ ಅಧಿಕಾರ ಇಲ್ಲ. ಕೇವಲ ನ್ಯಾಯಾಲಯಕ್ಕೆ ಮಾತ್ರ ಅಂತಹ ಅಧಿಕಾರ ಇರುತ್ತದೆ. ಒಮ್ಮೆ ಸಿಬಿಐ ತನಿಖೆ ಆರಂಭವಾದ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಸಿಬಿಐ ಎಫ್ಐಆರ್‌ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯ ಕ್ರೈಂ‌ ತನಿಖೆಯ ವೇಳೆ ಸಿಬಿಐ ಸ್ವತಂತ್ರವಾಗಿರುತ್ತದೆ ಎಂದು ತಿಳಿಸಿದರು.

ಈ ವೇಳೆ ಲೋಕಾಯುಕ್ತರು ದಾಖಲಿಸುವ ಎಫ್‌ಐಆರ್‌ ಏನಾಗಲಿದೆ ಎಂದು ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿತು. ಇದಕ್ಕೆ ವಕೀಲ‌ ದಳವಾಯಿ ಉತ್ತರಿಸಿ, ಲೋಕಾಯುಕ್ತ ಎಫ್‌ಐಆರ್‌ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಸರ್ಕಾರ ಸಿಬಿಐಗೆ ನೀಡಿದ ಅನುಮತಿಯನ್ನು ಅಕ್ರಮವಾಗಿ ಹಿಂಪಡೆದಿದೆ. ಇದರಿಂದ ಸಿಬಿಐ ಎಫ್‌ಐಆರ್‌ ರದ್ದು ಮಾಡಲಾಗಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರಿದರು.

ಡಿಕೆಶಿ ಪರ ಖ್ಯಾತ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ನಾವು ರಾಜ್ಯ ಸರ್ಕಾರ ಕೇವಲ ಅನುಮತಿಗೆ ಮಾತ್ರ ಸೀಮಿತ. ನಮಗೂ ಎಫ್‌ಐಆರ್‌ ರದ್ದು ಕೋರಿದ್ದಕ್ಕೂ ಸಂಬಂಧವಿಲ್ಲ. ಇಲ್ಲಿ ವೈಯುಕ್ತಿಕ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೆ ಏನು ಸಂಬಂಧವಿಲ್ಲ. ಇಲ್ಲಿ ಸಿಬಿಐ ಹೇಗೆ ಅನುಮತಿ ಪಡೆದಿದೆ? ಅದನ್ನ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದನ್ನು ಕೋರ್ಟ್‌ಗೆ ತಿಳಿಸದೇ ವಂಚಿಸಲಾಗಿದೆ. ಇಡಿ ದಾಖಲೆಗಳನ್ನು ಸ್ಥಳೀಯ ಪೊಲೀಸರಿಗೆ ಕಳುಹಿಸಬೇಕಿತ್ತು. ಆದರೆ ಅವರು ಸಿಬಿಐಗೆ ಕಳುಹಿಸಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿರಲಿಲ್ಲ ಎಂದು ಹೇಳಿದರು.

ವಾದಿ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ವಿಚಾರಣೆ ಮುಕ್ತಾಯ ಮಾಡಿತೀರ್ಪು ಕಾಯ್ದಿರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!