ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ವರಿಷ್ಠರನ್ನು ಭೇಟಿಯಾಗಲು ಸೋಮವಾರ ದಿಲ್ಲಿಗೆ ತೆರಳಿದ್ದಾರೆ. ಒಂದು ವೇಳೆ ಮೈತ್ರಿ ಅಭ್ಯರ್ಥಿ ಆಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ದಿಲ್ಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಲ್ಲಿ ಸ್ಪರ್ಧಿಸುವಂತೆ ಜನರು ಕೂಡ ಒತ್ತಡ ಹಾಕುತ್ತಿದ್ದಾರೆ. ನಾವೆಲ್ಲರೂ ಸಮಾನ ಮನಸ್ಕರು ಸಭೆ ಸೇರಿದ್ದೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರವನ್ನು ಎನ್‌ಡಿಎ ವಶಕ್ಕೆ ತಗೊಳ್ಳಬೇಕು ಎಂದು ನಿರ್ಣಯಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ನಮ್ಮ ರಾಜ್ಯ ನಾಯಕರು ಕೂಡ ನನ್ನ ಸ್ಪರ್ಧೆಯ ಬಗ್ಗೆ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸ್ವಲ್ಪ ಮುಂಗೋಪ ಅಷ್ಟೇ. ಆದರೆ ಅಂತಿಮವಾಗಿ ಅವರ ಜತೆ ವರಿಷ್ಠರು ಮಾತಾಡಿದ ಬಳಿಕ ನನ್ನ ಸ್ಪರ್ಧೆಗೆ ಅವರೂ ಒಪ್ಪಿಗೆ ಸೂಚಿಸುವ ಭರವಸೆ ಇದೆ. ಕಳೆದ ಬಾರಿ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದವನೇ ನಾನು. ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ ನಮ್ಮ ಭಾಗದಲ್ಲಿ ಜೆಡಿಎಸ್ ಕಥೆ ಏನಾಗುತ್ತಿತ್ತು? ಹೀಗಾಗಿ ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆ ಎಂದು ಅವರು ತಿಳಿಸಿದ್ದಾರೆ.
ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಒಂದುವೇಳೆ ಅದು ಸಾಧ್ಯ ವಾಗಿಲ್ಲ ಅಂದರೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಗಾಗಲೇ ನಮ್ಮ ಕ್ಷೇತ್ರದ ಜನರು ಹಲವು ಬಾರಿ ಸ್ವತಂತ್ರವಾಗಿ ನಿಂತರೂ ನನ್ನನ್ನು ಗೆಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದಾದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಹೊರತು ಕಾಂಗ್ರೆಸ್‌ಗೆ ಸೇರಲ್ಲ. ಇದುವರೆಗೆ ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.