ಜಾತಿ ವ್ಯವಸ್ಥೆ ನಿಂತ ನೀರು: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ,ಹಾವೇರಿ:

ಜಾತಿ ಎಂಬುದನ್ನು ಮನುಷ್ಯನು ತನ್ನ ಸ್ವಾರ್ಥ ಸಾಧನೆಗಾಗಿ ಮಾಡಿಕೊಂಡಿರುವಂಥದ್ದು, ಮನುಷ್ಯ- ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಸುಬು ಅಥವಾ ಕಾಯಕದಿಂದ ಮೇಲು-ಕೀಳು ಮಾಡಿದ್ದನ್ನೇ ಶರಣರು ವಿರೋಧಿಸಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಾವೇರಿ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ನಡೆದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ದೋಣಿಗೆ ಹುಟ್ಟು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಹೋರಾಟ ನಡೆಸಿದ್ದೇ ಈ ಮಾನವರ ನಡುವಿನ ತಾರತಮ್ಯದ ವಿರುದ್ಧ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಅವರನ್ನು ಬಸವಣ್ಣನವರ ನಿಜಶರಣ ಎಂದೇ ಗೌರವಿಸಿದ್ದರು ಎಂದರು.

ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಖಂಡಿಸಿದ್ದು ಶರಣರು. ಅವರು ಕಾಯಕ ತತ್ವ ಅನುಸರಿಸಿದರು. ಯಾವುದೇ ವೃತ್ತಿ ಕೀಳಲ್ಲ, ಕಾರಣ ಯಾವುದಾದರೂ ವೃತ್ತಿ ಕೈಗೊಂಡು ಅದರಲ್ಲಿನ ಆದಾಯದಿಂದ ಹೊಟ್ಟೆ ಹೊರೆಯಬೇಕು. ಸುಮ್ಮನೇ ಕೂತು ಉಣ್ಣಬೇಡಿ ಎಂದು ಶರಣರು ಹೇಳಿದ್ದನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.

ಜಾತಿ ವ್ಯವಸ್ಥೆ ಎಂಬುದು ನಿಂತ ನೀರು ಅದಕ್ಕೆ ಚಲನೆ ಇಲ್ಲ. ಅದರಿಂದ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಹಿನ್ನೆಡೆಯಾಗುತ್ತದೆ. ಕಾರಣ ಜಾತಿ ವ್ಯವಸ್ಥೆಯಿಂದ ಹೊರತಾದ ಸಮಾಜ ಕಟ್ಟಿದವರು, ಅದಕ್ಕೆ ಚಲನ ಶಕ್ತಿಯನ್ನು ನೀಡಿದವರು ಬಸವಾದಿ ಶರಣರು ಎಂಬುದನ್ನು ಮರೆಯುವಂತಿಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಬದಲಾವಣೆಗಾಗಿ ಕೆಲಸ ಮಾಡೋಣ, ಶರಣರ ಸಂದೇಶಗಳನ್ನು ಜನರಿತೆ ತಲುಪಿಸುವ ಮೂಲಕ ಜಾಗೃತಿ ಮೂಡಿಸೋಣ ಎಂದು ಕರೆ ನೀಡಿದರು.

ಯಾವುದೇ ಸಮುದಾಯದವರೇ ಆಗಿರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಎಲ್ಲ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರಿಂದಲೇ ಸಮಾಜದಲ್ಲಿ ಆರ್ಥಿಕ ಸಾಮಾಜಿಕ ಅಸಮಾನತೆ ಉಂಟಾಗಲು ಕಾರಣವಾಗಿದೆ. ಇನ್ನು ವಿವೇಕಾನಂದ ವಾಣಿಯಂತೆ ಹಸಿದವನಿಗೆ ಅನ್ನ ಕೊಡದ ಧರ್ಮ ಧರ್ಮವೇ ಅಲ್ಲ, ಸಮಾಜ ಸಮಾಜವೇ ಅಲ್ಲ ಎಂಬುದನ್ನು ನಾವೆಲ್ಲರೂ ನೆನಪಿಡಬೇಕೆಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಂಸಾರವೆಂಬ ಸಾಗರ ದಾಟಲು ಪ್ರೇರಣೆ ಆದವರು. ಅವರ ಪ್ರತಿ ವಚನಗಲೂ ನಮಗೆ ಹಲವು ಸಂದರ್ಭಗಳಲ್ಲಿ ದಾರಿದೀಪವಾಗಿವೆ. ಅವರು ಕೇವಲ ಕವಿಯಲ್ಲ ಮಹಾನ್ ಮಾನವತಾವಾದಿ, ಅವರ ೨೭೮ ವಚನಗಳು ನಮಗೆ ಲಭಿಸಿದ್ದು, ಪ್ರತಿಯೊಂದೂ ಸಹ ಸಮಾಜದ ಮೌಢ್ಯ ತೊಳೆಯಲು ಚಾಟಿಯಾಗಿ ಕೆಲಸ ಮಾಡಿವೆ ಎಂದು ಸ್ಮರಿಸಿದರು.
ಜಾತಿ ವ್ಯವಸ್ಥೆ, ತಾರತಮ್ಯ ನೀತಿಯಿಂದ ದೇಶಕ್ಕೆ ನಷ್ಟವೇ ಆಗಿದೆ. ರಾಮ ಉಚ್ಛ ಜಾತಿಯವನಲ್ಲ ಆದರೆ ತನ್ನ ಶ್ರೇಷ್ಠ ಕಾರ್ಯದಿಂದ ಇಂದು ಎಲ್ಲರಿಂದಲೂ ಪೂಜಿತನಾಗುತ್ತಿದ್ದಾನೆ, ಪರಮ ಪುರುಷೋತ್ತಮ ಎನಿಸಿಕೊಂಡಿದ್ದಾನೆ. ಹೀಗಾಗಿ ಪ್ರತಿ ವ್ಯಕ್ತಿಯ ಶ್ರೇಷ್ಠ ಕೆಲಗಳಿಂದ ನಾವು ಅವರನ್ನು ಸ್ಮರಿಸುತ್ತೇವೆ ಎಂಬುದಕ್ಕೆ ಶ್ರೀರಾಮನೇ ಉತ್ತಮ ಸಾಕ್ಷಿ ಎಂದರು.
ಇನ್ನು ಸಮಾಜದ ಬೇಡಿಕೆಯಂತೆ ಈ ಸಮುದಾಯದ ೩೯ ಉಪ ಪಂಗಡಗಳ ಪೈಕಿ ಕೆಲವೊಂದು ಬಿಟ್ಟು ಹೋಗಿದ್ದು ಅವುಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕೆಲಸಕ್ಕೆ ನಾನು ಸದಾ ಬೆಂಬಲವಾಗಿರುತ್ತೇನೆ. ಈ ಕುರಿತು ಜ.೧೭ರಂದು ಈ ಕುರಿತು ಸಭೆ ನಡೆಸಿ ನಿಮ್ಮ ಅಹವಾಲು ಸಲ್ಲಿಸಿದಲ್ಲಿ ಅದನ್ನು ಸಂಬಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ ೮ನೇ ಪೀಠಾರೋಹಣ ಕಾರ್ಯಕ್ರಮ ಜರುಗಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಸಚಿವ ಮಾಂಕಾಳ ವೈದ್ಯ, ಸಂಸದ ಜಿ.ಎಂ. ಸಿದ್ದೇಶ್ವರ, ವಿ.ಪ.ಸದಸ್ಯ ಎನ್. ರವಿಕುಮಾರ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ಮತ್ತಿತರರು ಇದ್ದರು. ಇಳಕಲ್ಲ ವಿಜಯಮಹಾಂತೇಶ್ವರ ಮಹಾಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸೇರಿದಂತೆ ಹಲವು ಶ್ರೀಗಳು ಸಾನಿಧ್ಯ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!