ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಳ್ಳು ಹೊಗಳಿಕೆ ಗಳಿಸಲು ಹಠ ಹಿಡಿದಿದೆ. 900 ಇಲಿಗಳನ್ನು ತಿಂದ ನಂತರ ಬೆಕ್ಕು ಹಜ್‌ಗೆ ಹೋಯಿತು ಎಂಬ ಗಾದೆ ಈ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 10 ವರ್ಷಗಳಲ್ಲಿ ಮೋದಿ ಸರ್ಕಾರವು ಮಧ್ಯಮ ವರ್ಗದಿಂದ 54.18 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಿದೆ. ಈಗ ನೀಡುತ್ತಿರುವ 12 ಲಕ್ಷದವರೆಗಿನ ವಿನಾಯಿತಿಯ ಪ್ರಕಾರ 1 ವರ್ಷಕ್ಕೆ 80,000 ಉಳಿತಾಯ, ತಿಂಗಳಿಗೆ ಕೇವಲ 6,666 ರೂ ಮಾತ್ರ. ಇದನ್ನ ಸ್ವತಃ ಹಣಕಾಸು ಸಚಿವರೇ ಹೇಳುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಯುವಕರಿಗೆ ಏನೂ ಇಲ್ಲ. ಮೇಕ್ ಇನ್ ಇಂಡಿಯಾ, ಅದರ ನ್ಯೂನತೆ ಮರೆಮಾಚಲು ರಾಷ್ಟ್ರೀಯ ಉತ್ಪಾದನಾ ಮಿಷನ್ ಆಗಿ ಮಾಡಲಾಗಿದೆ ಎಂದರು.
ನಿನ್ನೆ ಪ್ರಧಾನಿ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಎಂದಿದ್ದರು. ಆದರೆ, ಬಜೆಟ್‌ನಲ್ಲಿ ಅಂತಹದ್ದೇನಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಮಾರ್ಗಸೂಚಿಯೇ ಇಲ್ಲ. ಕೃಷಿ ಸರಕುಗಳ ಮೇಲಿನ ಜಿಎಸ್ಟಿ ದರಗಳಲ್ಲಿ ರಿಯಾಯ್ತಿ ನೀಡಿಲ್ಲ. ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಬಡ ಮಕ್ಕಳಿಗೆ ಆರೋಗ್ಯ, ಶಿಕ್ಷಣಕ್ಕೆ ಯಾವುದೇ ಯೋಜನೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಖಾಸಗಿ ಹೂಡಿಕೆ ಹೆಚ್ಚಿಸಲು ಯಾವುದೇ ಸುಧಾರಣಾ ಕ್ರಮವಿಲ್ಲ. ಬಡವರು, ಕಾರ್ಮಿಕರ ಆದಾಯ ಹೆಚ್ಚಿಸಲು ಏನೂ ಮಾಡಿಲ್ಲ ಜಿಎಸ್ಟಿಯ ಬಹು ದರಗಳಲ್ಲಿ ಸುಧಾರಣೆ ಬಗ್ಗೆ ಮಾತೇ ಬಂದಿಲ್ಲ. ಉದ್ಯೋಗ ಹೆಚ್ಚಿಸುವ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ. ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಸ್ಕೀಂ ಕೇವಲ ಘೋಷಣೆಗಳಾಗಿ ಉಳಿದಿವೆ. ಒಟ್ಟಾರೆ ಈ ಬಜೆಟ್ ಜನರನ್ನ ಮೂರ್ಖರನ್ನಾಗಿಸಲು ಮೋದಿ ಸರ್ಕಾರದ ಪ್ರಯತ್ನವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.