April 15, 2026
Wednesday, April 15, 2026
spot_img

ಜಾನುವಾರುಗಳ ಮರಣಮೃದಂಗ: ಕಲುಷಿತ ನೀರು ಕುಡಿದು 9ಕ್ಕೂ ಹೆಚ್ಚು ಎಮ್ಮೆಗಳ ಸಾ*ವು

ಹೊಸದಿಗಂತ ರಟ್ಟೀಹಳ್ಳಿ:

ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಆಕಸ್ಮಿಕ ಬೆಂಕಿ ಅವಘಡದ ನೆನಪು ಮಾಸುವ ಮುನ್ನವೇ, ಮೇದೂರ ಗ್ರಾಮದಲ್ಲಿ ಜಾನುವಾರುಗಳ ಸರಣಿ ಸಾವು ಸಂಭವಿಸಿದ್ದು, ರೈತಾಪಿ ವರ್ಗದ ನಿದ್ದೆಗೆಡಿಸಿದೆ.

ಮೇದೂರ ಗ್ರಾಮದ ರೈತ ಸಿದ್ದಪ್ಪ ಬತ್ತಿಕೊಪ್ಪ ಎಂಬುವವರು ಸೋಮವಾರ ಸಂಜೆ ಎಂದಿನಂತೆ ಗ್ರಾಮದ ಹೊರವಲಯದಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಗುಂಡಿಯೊಂದರಲ್ಲಿದ್ದ ನೀರನ್ನು ಎಮ್ಮೆಗಳು ಕುಡಿದಿದ್ದವು. ಮನೆಗೆ ಮರಳುವಷ್ಟರಲ್ಲಿ ಸುಮಾರು 9 ಎಮ್ಮೆಗಳು ಮಾರ್ಗಮಧ್ಯೆಯೇ ನರಳಾಡಿ ಪ್ರಾಣಬಿಟ್ಟಿವೆ.

ಮಂಗಳವಾರ ಮಧ್ಯಾಹ್ನ ರೈತ ರಾಮಪ್ಪ ಮಾಸೂರ ಎಂಬುವವರ ಎಮ್ಮೆಗಳು ಸಹ ಅದೇ ಗುಂಡಿಯ ನೀರನ್ನು ಕುಡಿದು ಸಾವನ್ನಪ್ಪಿವೆ. ಒಂದೇ ಗುಂಡಿಯ ನೀರು ಕುಡಿದ ನಂತರ ಈ ಸಾವುಗಳು ಸಂಭವಿಸುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಜಾನುವಾರುಗಳು ಕಲುಷಿತ ನೀರು ಅಥವಾ ಆಹಾರ ಸೇವಿಸಿರುವುದು ಈ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯಾಧಿಕಾರಿ ಮಂಜುನಾಥ್ ಅವರು ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

“ಸದ್ಯಕ್ಕೆ ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ನಿಖರವಾದ ಕಾರಣ ತಿಳಿಯಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ,” ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡ ರೈತರು ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !