ಹೊಸದಿಗಂತ ವರದಿ ತುಮಕೂರು :
ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ತಡರಾತ್ರಿ ಬೆಂಕಿ ಬಿದ್ದಿದ್ದು ಹಸುಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಕೊಬ್ಬರಿ, ಮರಮುಟ್ಟುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಕರೀಕೆರೆ ಗ್ರಾಮದ ವಾಸಿ ನಂದೀಶಯ್ಯ ಎಂಬುವರಿಗೆ ಸೇರಿದ ತೋಟದ ದನದ ಕೊಟ್ಟಿಗೆ ಬೆಂಕಿ ಬಿದ್ದಿದ್ದು ಕೊಟ್ಟಿಗೆಯಲ್ಲಿ ಇದ್ದ ಒಂದು ಹಳ್ಳಿಕಾರ್ ತಳಿಯ ಜೋಡಿ ಎತ್ತುಗಳು, ಹಸು ಮತ್ತು ಕರು ಬೆಂಕಿಗೆ ಆಹುತಿಯಾಗಿವೆ. ಶೆಡ್ಡಿನಲ್ಲಿ ಇದ್ದಂತಹ 10,000 ಕೊಬ್ಬರಿ, ಶೆಡ್ ಪಕ್ಕದಲ್ಲಿ ಇದ್ದಂತಹ ರಾಗಿ ಹುಲ್ಲಿನ ಬಣವೆಯೂ ಬೆಂಕಿಗೆ ಆಹುತಿಯಾಗಿವೆ. ಶೆಡ್ಡಿನಲ್ಲಿ ಮನೆ ಕಟ್ಟಲು ಬೇಕಾದಂತಹ ಲಕ್ಷಾಂತರ ಮೌಲ್ಯದ ಮರಮುಟ್ಟುಗಳು ಇದ್ದು ಅವಕ್ಕೂ ಬೆಂಕಿ ತೆಗುಲಿದಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಬೆಂಕಿ ನಂದಿಸಲು ಶ್ರಮಿಸಿದ್ದಾರೆ.
ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಲಕ್ಷಾಂತರ ರೂ ಮೌಲ್ಯ ನಷ್ಟ ಉಂಟಾಗಿದೆ. ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.