ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಅ.10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಹೇಳಿದರು.
ಪಟ್ಟಣದ ಸಂಜಯ ಚಿತ್ರಮಂದಿರದ ಬಳಿ ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ನೀರು ಬಿಡದಂತೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಿಂದ ಕೆ.ಆರ್.ಎಸ್. ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದೇ ಹೋದರೆ, ರೈತರು ಮತ್ತು ಕನ್ನಡಪರ ಹೋರಾಟಗಾರರು ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ಹೊಸೂರು, ಚಾಮರಾಜನಗರ ಹಾಗೂ ಕನಕಪುರ ಗಡೀ ಭಾಗಗಳಲ್ಲಿ ಅಕ್ಟೋಬರ್ 10ರಂದು ಬಂದ್ ಮಾಡುವ ಮೂಲಕ ಚಳವಳಿ ನಡೆಸುತ್ತೇವೆ. ಈ ವಿಚಾರವಾಗಿ ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿದರು.
ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕಾರಣಿಗಳು ಕರ್ನಾಟಕದ ವಿರುದ್ಧ ದ್ವೇಷಾಸೂಯೆ ಸಾಧಿಸುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಕನ್ನಡಿಗರಿಂದ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.