ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಭಟನೆಗಳು ಶುರುವಾಗಿದ್ದವು. ಇಂದು ಕೂಡ ಕಾವೇರಿ ಕೂಗು ಹೆಚ್ಚಾಗಲಿದ್ದು, ಮಂಡ್ಯ, ಬೆಂಗಳೂರಿನಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯೆತಗಳಿವೆ.
ಇಂದು ಕಾವೇರಿ ಜಲಾನಯನ ಪ್ರದೇಶ ಹಾಗೂ ಮಂಡ್ಯದಲ್ಲಿ ರೈತರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಬೆಂಗಳೂರು ಕೂಡ ಇದರಿಂದ ಹೊರತಾಗಿಲ್ಲ. ನಿನ್ನೆಯೇ ಕರವೇ ಕಾರ್ಯಕರ್ತರು ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ್ದರು. ಹಾಗಾಗಿಯೇ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇನ್ನು ನಾಳೆ ರೈತ ಹಿತರಕ್ಷಣಾ ಸಮಿತಿ ಮಂಡ್ಯ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಪ್ರಮುಖ ಜಂಕ್ಷನ್‌ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆಗೆ ನಿರ್ಧರಿಸಲಾಗಿದೆ.
ರಾಜಧಾನಿ ಬೆಂಗಳೂರಿಗೆ ನೀರು ಪೂರೈಕೆ ನಿಲ್ಲಿಸಲು ರೈತಪರ ಸಂಘಟನೆಗಳು ಆಗ್ರಹಿಸಿವೆ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಬಂದರೆ ಹೇಗಿರುತ್ತದೆ ಎನ್ನುವುದು ಎಲ್ಲರಿಗೂ ಅರ್ಥವಾಗಲಿ, ರಾಜಧಾನಿ ಬೆಂಗಳೂರಿಗೇ ನೀರಿಲ್ಲ ಎಂದರೆ ಏನಾದರೂ ಪರಿಹಾರ ಕಂಡುಹಿಡಿಯುತ್ತಾರೆ ಎನ್ನುವುದು ಪ್ರತಿಭಟನಾಕಾರರ ವಾದವಾಗಿದೆ.
ಇಡೀ ಬೆಂಗಳೂರಿಗೆ ನೀರು ಸರಬರಾಜು ಆಗುವ ಟಿ.ಕೆ. ಪಂಪ್‌ಹೌಸ್‌ಗೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಲಿವೆ. ಬೆಂಗಳೂರಿಗೆ ಹೋಗುವ ನೀರನ್ನು ತಡೆಹಿಡಿದು ಮೈಸೂರು, ಮಂಡ್ಯ ಭಾಗದ ರೈತರ ಬೆಳೆಗೆ ನೀರು ಹರಿಸಿ ಎಂದು ಆಗ್ರಹಿಸಿದ್ದಾರೆ. ಮೈಸೂರು, ಮಂಡ್ಯ ಭಾಗದಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮುಕ್ಯವಾಗಿ ವಿಧಾನಸೌಧದ ಬಳಿ ಬ್ಯಾರಿಕೇಡ್ ಹಾಕಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.