ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೆ ಇಂದು ಕಾವೇರಿ ನದಿಯಿಂದ ನಿಗದಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ. ಮುಂದಿನ ತಿಂಗಳು ರಾಜ್ಯ ಹರಿಸಬೇಕಾದ ನೀರಿಗೆ ಜಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ವಾದ ಮಂಡಿಸಿದೆ. ಕರ್ನಾಟಕದ ಈ ವಾದವನ್ನು ಪರಿಗಣಿಸಿದ ಪ್ರಾಧಿಕಾರವು, ಈಗ ನಿಗದಿಗಿಂತ ನೀರು ಹರಿದಿದೆ. ಅದನ್ನೇ ಮುಂದಿನ ತಿಂಗಳ ನೀರಿಗೆ ಜಮೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದೆ.
ಈವರೆಗೆ ತಮಿಳುನಾಡು ರಾಜ್ಯಕ್ಕೆ 71.56 ಟಿಎಂಸಿ ನೀರು ಹರಿಸಬೇಕಿತ್ತು. ಮಳೆ ಹೆಚ್ಚಾಗಿ ಸುರಿದಿರುವ ಪರಿಣಾಮ 170 ಟಿಎಂಸಿ ನೀರು ಹರಿದಿದೆ. ಅಂದರೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕದಿಂದ ವಾದ ಮಂಡಿಸಲಾಗಿದೆ.
ಎರಡೂ ರಾಜ್ಯಗಳು ಕಾವೇರಿ ನದಿ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಿ. ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಿ ಎಂದು ಎರಡೂ ರಾಜ್ಯಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.
ಕಳೆದ ಬಾರಿಯ ತೀವ್ರ ಬರದಿಂದಾಗಿ ಕಾವೇರಿ ಕೊಳ್ಳದ ಡ್ಯಾಂಗಳೆಲ್ಲಾ ಬರಿದಾಗಿದ್ದವು. ಬಂದ ಅಲ್ಪಸ್ವಲ್ಪ ಮಳೆಯಿಂದ ಡ್ಯಾಂಗಳಿಗೆ ಜೀವಕಳೆ ಬಂದಿದೆ ಅಷ್ಟೇ. ಡ್ಯಾಂನಲ್ಲಿ ಸ್ವಲ್ಪ ನೀರು ಕಾಣ್ತಿದ್ದಂತೆ ತಮಿಳುನಾಡು ಮತ್ತೆ ಆಟ ಆರಂಭಿಸಿತ್ತು. ನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೂಲಕ ಶಿಫಾರಸ್ಸು ಮಾಡಿಸಿತ್ತು.