ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಕಾವೇರಿ ನೀರಿನ ವಿಚಾರವನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಬೇಕಿದೆ. ವಿಪಕ್ಷವಾಗಿ ನಾವು ಎಲ್ಲ ಸಹಕಾರ ಕೊಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾವೇರಿ ನದಿಯ ನೀರಿನ ಪ್ರಮಾಣ, ಮಳೆಯ ಪ್ರಮಾಣ, ನಮ್ಮ ಬೇಡಿಕೆ, ತಮಿಳುನಾಡಿನ ಬೇಡಿಕೆ ಮಾತ್ರವಲ್ಲದೆ ವಸ್ತುಸ್ತಿತಿಯನ್ನು ಪ್ರತಪಾದಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಒಂದೆಡೆ ನೀರು ಕೊಡುವ ಸರಕಾರ ಇನ್ನೊಂದೆಡೆ ಪುನರ್ ಪರಿಶೀಲಿಸಲು ಕೋರುತ್ತಿದೆ. ಸಿಡಬ್ಲ್ಯುಎಂಎ ಆದೇಶ ಪಾಲನೆ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾವೇರಿ ನದಿಯ ನೀರಿನ ವಿಷಯದಲ್ಲಿ ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು. ಕರ್ನಾಟಕದ ನೆಲ, ಜಲ, ಸಂಸ್ಕøತಿ ವಿಚಾರ ಬಂದಾಗ ನಾವು ಒಂದಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಮಂಡ್ಯ, ಮೈಸೂರು ಭಾಗದ ರೈತರು ಇವತ್ತು ಧರಣಿ ಮಾಡುತ್ತಿದ್ದಾರೆ. ನೀರಿನ ಕೊರತೆ ರೈತರನ್ನು ಕಂಗೆಡಿಸಿದೆ. ಅವರ ಕೂಗು, ಬೇಡಿಕೆ, ಆಕ್ರೋಶಕ್ಕೆ ಸ್ಪಂದಿಸುವ ಕೆಲಸ ರಾಜ್ಯ ಸರಕಾರದಿಂದ ಆಗಬೇಕು ಎಂದು ನುಡಿದರು.