ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ‘ಇಂಡಿಯ’ ಪಾಲುದಾರ ಪಕ್ಷವನ್ನು ಖುಷಿ ಪಡಿಸಲು ರಾಜ್ಯದ ಕಾಂಗ್ರೆಸ್ ಸರಕಾರವು ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮಿಳುನಾಡಿನ ಸರಕಾರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಪ್ರೀತಿ ಸಂಪಾದಿಸಲು ನಮ್ಮ ಬೆಳೆಗಳು, ಬೆಂಗಳೂರಿನ ಕುಡಿಯುವ ನೀರಿಗೆ ಬೇಕಾದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಹಿಂದೆ ಮೇಕೆದಾಟು ವಿಚಾರವಾಗಿ ರಸ್ತೆಯಲ್ಲಿ ಓಡಾಡಿ ಹೋರಾಟ ಮಾಡುವುದಾಗಿ ಹೇಳುತ್ತಿದ್ದವರು ಈಗ ತಮಿಳುನಾಡಿಗೆ ಫೇವರ್ ಮಾಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಕಟುವಾಗಿ ಟೀಕಿಸಿದರು.
ಇದರ ವಿರುದ್ಧವಾಗಿ ಮಂಡ್ಯ- ಮೈಸೂರು ಬಾಗದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 23ರಂದು ನಡೆಯುವ ಸರಕಾರದ ಸಭೆಯಲ್ಲಿ ನಾವು ಸರಕಾರದ ನಿಲುವನ್ನು ವಿರೋಧಿಸುತ್ತೇವೆ. ಸರಕಾರದ ವಿರುದ್ಧ ಇದೇ 29ರಂದು ತೀವ್ರತರದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸರ್ವಪಕ್ಷ ಸಭೆ ಬಹಿಷ್ಕರಿಸುವ ನಿರ್ಧಾರ ಮಾಡಿಲ್ಲ. ಆದರೆ, ಸಭೆಯಲ್ಲಿ ಸರಕಾರದ ನಿಲುವನ್ನು ವಿರೋಧಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.