ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ (Sri Guru Raghavendra Sahakara Bank) ಅಕ್ರಮದ ತನಿಖೆ ಸಿಬಿಐಗೆ (CBI) ಒಪ್ಪಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಕುರಿತು ವಿಧಾನ ಪರಿಷತ್‍ನಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್‍ನ (Congress) ಯು.ಬಿ ವೆಂಕಟೇಶ್ ಪರಿಷತ್‍ನಲ್ಲಿ ಸ ವಿಷಯ ಪ್ರಸ್ತಾಪ ಮಾಡಿ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮದ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈಗ ಇರುವ ಆಡಳಿತಾಧಿಕಾರಿಯನ್ನು ಬದಲಾವಣೆ ಮಾಡಬೇಕು. ಈ ಅಕ್ರಮದ ಹಿಂದೆ ಪಟ್ಟ ಭದ್ರ ಹಿತಾಸಕ್ತಿಗಳು ಇದ್ದಾರೆ. ಬ್ಯಾಂಕ್ ಉಳಿಸಲು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಅಕ್ರಮಗಳ ಹಿನ್ನೆಲೆಯಲ್ಲಿ ಆರ್‍ಬಿಐ ಬ್ಯಾಂಕ್ ರದ್ದು ಮಾಡಲು ಪತ್ರ ಬರೆದಿದೆ. ಆದರೆ ಸರ್ಕಾರ ರದ್ದು ಮಾಡದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ
ಇದಕ್ಕೆ ಉತ್ತರ ನೀಡಿದ ಸಚಿವ ರಾಜಣ್ಣ, ಬ್ಯಾಂಕ್ ದಾಖಲಾತಿಗಳು ಕನ್ನಡದಿಂದ ಇಂಗ್ಲಿಷ್‍ಗೆ ಭಾಷಾಂತರ ಕೆಲಸ ನಡೆಯುತ್ತಿದೆ. ತರ್ಜುಮೆ ಕೆಲಸ ಮುಗಿದ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸುತ್ತೇವೆ. ಸರ್ಕಾರ ಆರ್‍ಬಿಐಗೆ ನಿಲುವನ್ನು ತಿಳಿಸಲಿದೆ. ರದ್ದು ಮಾಡದಂತೆ ಮನವಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.