ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ: ವಿಪಕ್ಷಗಳ ಮೈತ್ರಿ ಸಭೆಗೂ ಮುನ್ನವೇ ದಾಳ ಉರುಳಿಸಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಿಜೆಪಿ ವಿರುದ್ಧ ಒಂದಾದ ವಿಪಕ್ಷಗಳು 2ನೇ ಸುತ್ತಿನ ಮಹಾ ಸಭೆ ಇಂದು(ಜು.17) ಹಾಗೂ ನಾಳೆ(ಜು.18) ಬೆಂಗಳೂರಿನಲ್ಲಿ ಆಯೋಜಿಸಿದ್ದು, ಕೆಲವೇ ಹೊತ್ತಲ್ಲಿ ಸಭೆ ಆರಂಭಗೊಳ್ಳುತ್ತಿದೆ.

ಈ ನಡುವೆ ರಾಹುಲ್ ಗಾಂಧಿಯೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ. ಇದೀಗ ಈ ಹೇಳಿಕೆ ಮೈತ್ರಿ ಸಭೆಗೂ ಮುನ್ನವೇ ಮಿತ್ರ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೀಡಿದ ಈ ಸ್ಫೋಟಕ ಹೇಳಿಕೆ ಮೈತ್ರಿ ಸಭೆ ಮುನ್ನವೇ ಮಿತ್ರ ಪಕ್ಷಗಳಿಗೆ ಹೊಸ ವೈಮನಸ್ಸು ಉಂಟುಮಾಡುವ ಲಕ್ಷಣ ಗೋಚರಿಸುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇದೇ ರೀತಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ಅದ್ವಿತೀಯ ಗೆಲುವು ವಿಪಕ್ಷಗಳ ಪಾಲಾಗಲಿದೆ. ರಾಹುಲ್ ಗಾಂಧಿ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ಈಗಾಗಲೇ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆ ಹಲವು ಬಾರಿ ಮುನ್ನಲೆಗೆ ಬಂದಿದೆ. ಆದರೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಎಲ್ಲಾ ಪಕ್ಷಗಳು ಹೇಳಿವೆ. ಇಷ್ಟಾದರೂ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಕೆಲ ನಾಯಕರು ವಿಪಕ್ಷಗಳ ನೇತೃತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅನ್ನೋ ಹೇಳಿಕೆಯಿಂದ ಇದೀಗ ಕೆಲ ನಾಯಕರಿಗೆ ಹಿನ್ನಡೆಯಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್,ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಹಲವು ನಾಯಕರು ಸಭೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಘಟಾನುಘಟಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!