September 16, 2026
Wednesday, September 16, 2026
spot_img

ಮುರಿದುಬಿದ್ದ ಕದನ ವಿರಾಮ ಒಪ್ಪಂದ: ಬಹ್ರೇನ್, ಕುವೈತ್ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರ ಈಗ ಅತ್ಯಂತ ವಿನಾಶಕಾರಿ ಹಂತಕ್ಕೆ ತಲುಪಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೇನ್ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ 85ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಭೀಕರ ದಾಳಿ ನಡೆಸಿದೆ. ಇಷ್ಟೇ ಅಲ್ಲದೆ, ಅಮೆರಿಕದ ಹೆಮ್ಮೆಯ ಅತ್ಯಾಧುನಿಕ MQ-9 ರೀಪರ್ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದೆ. ಅಮೆರಿಕವು ಇರಾನ್‌ನ 80ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿ, ತೈಲ ರಫ್ತು ಪರವಾನಗಿ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಈ ಪ್ರಬಲ ಪ್ರತೀಕಾರ ತೀರಿಸಿಕೊಂಡಿದೆ.

ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಅಟ್ಯಾಕ್: ಮೊಳಗಿದ ಯುದ್ಧದ ಸೈರನ್

ಇರಾನ್‌ನ ಹಠಾತ್ ಮಿಸೈಲ್ ದಾಳಿಯಿಂದಾಗಿ ಬಹ್ರೇನ್ ಮತ್ತು ಕುವೈತ್ ದೇಶಗಳಾದ್ಯಂತ ಯುದ್ಧದ ಸೈರನ್‌ಗಳು ಮೊಳಗಿದ್ದು, ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಬಹ್ರೇನ್‌ನಲ್ಲಿರುವ ಯುಎಸ್‌ನ ಐದನೇ ನೌಕಾ ಜಿಲ್ಲೆ, ಬಂದರ್ ಸಲ್ಮಾನ್ ಮತ್ತು ಶೇಖ್ ಈಸಾ ವಾಯುನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಇತ್ತ ಕುವೈತ್‌ನ ಪ್ರಮುಖ ‘ಅಲಿ ಅಲ್ ಸೇಲಂ’ ವಾಯುನೆಲೆಯ ಮೇಲೂ ಇರಾನ್ ಡ್ರೋನ್‌ಗಳು ಅಪ್ಪಳಿಸಿದ್ದು, ಕುವೈತ್ ಮಿಲಿಟರಿ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಶತ್ರು ಕ್ಷಿಪಣಿಗಳನ್ನು ತಡೆಯಲು ಕಾರ್ಯಾಚರಣೆ ನಡೆಸುತ್ತಿದೆ.

ತೈಲ ನಿರ್ಬಂಧ ಮತ್ತು ಒಪ್ಪಂದದ ಉಲ್ಲಂಘನೆ

ಜೂನ್ ತಿಂಗಳಲ್ಲಿ ನಡೆದ ಮಧ್ಯಂತರ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಆಗಸ್ಟ್ 21 ರವರೆಗೆ ಇರಾನ್‌ಗೆ ತೈಲ ಮಾರಾಟ ಮಾಡಲು ಅಮೆರಿಕ ವಿನಾಯಿತಿ ನೀಡಿತ್ತು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ ಕಾರಣ, ಅಮೆರಿಕ ಈ ಪರವಾನಗಿಯನ್ನು ಅವಧಿಗಿಂತ ಮೊದಲೇ ರದ್ದುಗೊಳಿಸಿ ಜುಲೈ 17ರ ಗಡುವು ನೀಡಿದೆ. ಇದರಿಂದ ಕೆರಳಿದ ಇರಾನ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಈ ಯುದ್ಧಕ್ಕೆ ಮುಂದಾಗಿದೆ. ಇರಾನ್‌ನ ಮುಖ್ಯ ತೈಲ ಕೇಂದ್ರಗಳಾದ ಖಾರ್ಗ್ ದ್ವೀಪ, ಕೆಶ್ಮ್ ದ್ವೀಪ, ಬಂದರ್ ಅಬ್ಬಾಸ್ ಮತ್ತು ಸಿರಿಕ್ ನಗರಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಈಗಾಗಲೇ ಬಾಂಬ್ ಮಳೆಗರೆದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !