ದೆಹಲಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ಗುಜರಾತ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತ್ ನಲ್ಲಿ ಸತತ 7ನೇ ಬಾರಿಗೆ ಬಿಜೆಪಿ ಜಯಭೇರಿ ಗಳಿಸಿ ಗದ್ದುಗೆ ಏರಿದ್ದು, ಈ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾವಗಹಿಸಿದ ಪ್ರಧಾನಿ ಮೋದಿ, ಮತದಾರರ ಆಶೀರ್ವಾದದಿಂದ ಐತಿಹಾಸಿಕ ಗೆಲುವು ಸಿಕ್ಕಿದೆ. ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಒಂದು ಮಾತು ಹೇಳಿದ್ದೆ. ಈ ಬಾರಿ ನರೇಂದ್ರನ ದಾಖಲೆಯನ್ನು ಭೂಪೇಂದ್ರ ಮುರಿಯಲಿ ಎಂದು ಮತದಾರರಲ್ಲಿ ಹೇಳಿದ್ದೆ. ಮತದಾರರ ಯಾವ ಮಟ್ಟಿಗೆ ಆಶೀರ್ವಾದ ಮಾಡಿದ್ದಾರೆ ಎಂದರೆ ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದೆ. ಮತದಾರರ ಆಶೀರ್ವಾದದಿಂದ ಐತಿಹಾಸಿಕ ಗೆಲುವು ಸಿಕ್ಕಿದೆ. ಗೆಲುವಿಗೆ ಕಾರಣರಾದ ಜನರಿಗೆ ನಮಸ್ಕರಿಸುತ್ತೇನೆ. ಗುಜರಾತ್ ನ ಪ್ರತಿಯೊಬ್ಬ ಕಾರ್ಯಕರ್ತರು ಚಾಂಪಿಯನ್ ಗಳು. ಅವರ ಪರಿಶ್ರಮವೇ ಗೆಲುವಿಗೆ ಕಾರಣ. ಇಂತಹ ಐತಿಹಾಸಿಕ ಗೆಲುವಿಗೆ ಕಾರ್ಯಕರ್ತರೇ ಕಾರಣ ಎಂದು ಹೇಳಿದ್ದಾರೆ.

ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಗುತ್ತಿದೆ. ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರದಿಂದ ಗೆಲುವು ದಾಖಲಿಸಿದೆ. ಇಂತಹ ಶಾಂತಿಯುತವಾಗಿ ಚುನಾವಣೆ ನಡೆಸಿದಕ್ಕೆ ಚುನಾವಣಾ ಆಯೋಗ ಅಭಿನಂದನೆಗೆ ಅರ್ಹರಾಗಿದ್ದಾರೆ. ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಚಟುವಟಿಕೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಬಿಜೆಪಿ ಗುಜರಾತ್ ಪ್ರತಿ ಜನರ ನಂಬಿಕೆ, ವಿಶ್ವಾಸದ ಪಕ್ಷವಾಗಿದೆ. ಗುಜರಾತ್ ಜನರು ಅಭಿವೃದ್ಧಿ ಗಮನಿಸಿ ಮತ ನೀಡಿದ್ದಾರೆ. ಯುವಕರು ಯಾವಾಗ ಮತ ನೀಡುತ್ತಾರೆ. ಯುವಕರಿಗೆ ವಿಶ್ವಾಸ ಮೂಡಬೇಕು. ಈ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿದೆ. ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದೆ ಅನ್ನೋ ವಿಶ್ವಾಸ ಮೂಡಬೇಕು. ಈ ವಿಶ್ವಾಸವನ್ನು ಗುಜರಾತ್ ಜನತೆ ಬಿಜೆಪಿ ಮೇಲಿಟ್ಟಿದ್ದಾರೆ. ಇದರ ಪರಿಣಾಮ ಎಲ್ಲಾ ದಾಖಲೆ ಮುರಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

 

ಕೊರೋನಾ ಬಳಿಕ ಅಸ್ಸಾಂ, ಉತ್ತರ ಪ್ರದೇಶ, ಉತ್ತರಖಂಡ, ಗೋವಾ, ಮಣಿಪುರ ಸೇರಿದಂತೆ ಒಂದರ ಹಿಂದೆ ಒಂದರಂತೆ ಜನರು ಬಿಜೆಪಿಗೆ ಮತ ನೀಡಿದ್ದಾರೆ. ನೀವು ಬಿಜೆಪಿ ಮೇಲೆಟ್ಟಿರುವ ನಂಬಿಕೆಗೆ ತಕ್ಕ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಗೆಲುವಿನ ಹಿಂದೆಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ. ತಮ್ಮ ಜೀವನವನ್ನೇ ಬಿಜೆಪಿಗೆ ಮುಡಿಪಾಗಿಟ್ಟಿದ್ದಾರೆ. ತಮ್ಮ ವೈಯುಕ್ತಿಕ ಆಸೆ, ಆಕಾಂಕ್ಷೆ, ಇಚ್ಚೆ, ಉದ್ದೇಶಗಳನ್ನು ಬದಿಗಿಟ್ಟು ಸಮಾಜದ ಸೇವೆ ಮಾಡಲು ಪಣತೊಟ್ಟ ಕಾರ್ಯಕರ್ತರಿದ್ದಾರೆ. ಇವರ ಪರಿಶ್ರಮದಿಂದಲೇ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ ಎಂದು ಕಾರ್ಯಕರ್ತರನ್ನು ಮುಕ್ತ ಕಂಠದಿಂದ ಹೊಗಳಿದರು.

ಬಿಜೆಪಿ ಸರ್ಕಾರ, ಬಡವರಿಗೆ ಮನೆ, ನೀರು, ಬ್ಯಾಂಕ್ ಖಾತೆ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ನಾವು ಕೆಲಸ ಮಾಡಿದ್ದೇವೆ. ಇದನ್ನು ಯಾವ ಪಕ್ಷಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇಂದು ಭಾರತೀಯರಿಗೆ ಇದರಿಂದ ಆದ ಬದಲಾವಣೆ, ಸೌಲಭ್ಯದ ಅನುಭವವಾಗಿದೆ. ಯಾವ ಜಾತಿಯಲ್ಲಿ ಎಷ್ಟು ಮತವಿದೆ ಅನ್ನೋದನ್ನು ಲೆಕ್ಕ ಹಾಕಿ ನಾವು ಅಧಿಕಾರ ಮಾಡಿಲ್ಲ. ಬಿಜೆಪಿ ಈ ಆಧಾರದಲ್ಲಿ ಆಡಳಿತ ನಡೆಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.ಕಳೆದ 8 ವರ್ಷದಲ್ಲಿ ಬಡವರಿಗೆ ಮೂಲಭೂತ ಸೌಕರ್ಯ ನೀಡುವುದು, ಅವರನ್ನು ಬಡತನದಿಂದ ಮೇಲೆತ್ತಲು ಬೇಕಾದ ಯೋಜನೆಗಳನ್ನು ರೂಪಿಸಿ ಸೌಲಭ್ಯ ತಲುಪಿಸುತ್ತಿದ್ದೇವೆ. ಬಿಜೆಪಿ ಯಾವುದೇ ಯೋಜನೆ ಘೋಷಿಸುತ್ತದೆ ಎಂದರೆ ಅದು ಅತ್ಯುತ್ತಮವಾಗಿರಬೇಕು. ನಾವು ಕೇವಲ ಘೋಷಣೆ ಮಾಡಿ ಮರೆತು ಬಿಡುವ ಜಾಯಾಮಾನ ನಮ್ಮದಲ್ಲ. ನಾವು ಘೋಷಣೆ ಮಾಡಿದರೆಕಾರ್ಯಗತಗೊಳಿಸುತ್ತೇವೆ ಎಂದರು.

ಹಿಮಾಚಲ ಪ್ರದೇಶದಲ್ಲಿ ಶೇಕಡಾ 1 ರಷ್ಟು ಅಂತರದಲ್ಲಿ ಸೋಲು

ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದ ಪಕ್ಷ ಹಾಗೂ ಬಿಜೆಪಿ ನಡುವೆ ಕೇವಲ ಶೇಕಡಾ 1 ರಷ್ಟು ಅಂತರವಿದೆ. ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಸೋಲು ಗೆಲುವಿನ ಅಂತರದಲ್ಲೂ ಭಾರಿ ವ್ಯತ್ಯಾಸವಿತ್ತು. ಆದರೆ ಈ ಬಾರಿ ಬಿಜೆಪಿ ಕೆಲವೇ ಕೆಲವು ಅಂತರದಲ್ಲಿ ಸೋತಿದೆ. ಆದರೆ ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ನಿರಂತರ ಕೆಲಸ ಮಾಡಲಿದೆ ಎಂದು ಮೋದಿ ಭರವಸೆ ನಡಿದ್ದಾರೆ

ಹಿಮಾಚಲ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಈ ಸರ್ಕಾರಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ. ಬಿಜೆಪಿ ಅಭಿವೃದ್ಧಿಯ ರಾಜಕೀಯ ನಂಬಿಕೊಂಡಿದೆ. ಬಿಜೆಪಿ ಅಭಿವೃದ್ಧಿ ಹೊಸ ಭಾರತದ ಸಂಕಲ್ಪವಾಗಿದೆ. ಬಿಜೆಪಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಯುವ ಸಮೂಹದ ಪ್ರತಿಬಿಂಬಿವಾಗಿದೆ. ಅಭಿವೃದ್ಧಿ ಪರವಾಗಿರುವ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾರೆ. ಬಿಜೆಪಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅದೆಷ್ಟೇ ಕಠಿಣ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲಾದ ನಾಯಕರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!