ವಿಶ್ವಕಪ್ ನಲ್ಲಿ ತನ್ನದೇ ದೇಶದ ಸೋಲನ್ನು ಬೀದಿಗಿಳಿದು ಸಂಭ್ರಮಿಸಿದ್ದೇಕೆ ಗೊತ್ತಾ ಇರಾನಿಯನ್ನರು!?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫುಟ್ಬಾಲ್‌ ಇರಲಿ ಕ್ರಿಕೆಟ್‌ ಇರಲಿ ಅಥವಾ ಮತ್ಯಾವುದೇ ಕ್ರೀಡೆಯಾಗಿರಲಿ, ತನ್ನ ತಂಡ ಸೋಲುವುದನ್ನು ಯಾವುದೇ ದೇಶವೂ ಬಯಸುವುದಿಲ್ಲ. ಒಂದೊಮ್ಮೆ ಸೋತರೆ ದೇಶದ ಕ್ರೀಡಾಭಿಮಾನಿಗಳು ಅಪಾರವಾಗಿ ಶೋಕಿಸುತ್ತಾರೆ. ಸೋಲು ಅವರಲ್ಲೊಂದು ರೀತಿಯ ಹತಾಶ ಭಾವ ತಂದೊಡ್ಡುತ್ತದೆ. ಅದರಲ್ಲೂ ಫುಟ್ಬಾಲ್‌ ವಿಶ್ವಕಪ್‌ ನಂತಹ ವಿಶ್ವದ ಅಗ್ರಮಾನ್ಯ ಕ್ರೀಡೋತ್ಸವದಲ್ಲಿ ಸೋಲು ತಂದೊಡ್ಡುವ ನೋವು ಮನಸ್ಸಿನಿಂದ ಮಾಸಲು ಹಲವು ದಿನಗಳೇ ಬೇಕಾಗಬಹುದು. ಆದರೆ ಇತಿಹಾಸದಲ್ಲೇ ಮೊದಲು ಎಂಬಂತೆ, ಇಲ್ಲೊಂದು ದೇಶ ತನ್ನದೇ ಫುಟ್ಬಾಲ್ ತಂಡದ ಸೋಲನ್ನು ಸಂಭ್ರಮದಿಂದ ಆಚರಿಸುತ್ತಿದೆ. ಬೀದಿಗಿಳಿದು ನೃತ್ಯಮಾಡಿ ಸೋಲನ್ನು ಸೆಲಬ್ರೇಟ್‌ ಮಾಡುತ್ತಿದೆ!. ತನ್ನ ದೇಶದ ಸೋಲು ಅಲ್ಲಿನ ಜನರಿಗೆ ಆ ಪಾಟಿ ಖುಷಿ ತಂದಿದೆ! ಆದೇ ದೇಶ ಮತ್ಯಾವುದೂ ಅಲ್ಲ ಇರಾನ್!
ಬುಧವಾರ ಕತಾರ್‌ ನಲ್ಲಿ ನಡೆದ ವಿಶ್ವಕಪ್‌ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಅಮೇರಿಕಾ ವಿರುದ್ಧ ಇರಾನ್ ಫುಟ್‌ಬಾಲ್ ತಂಡದ ಸೋಲು ಇರಾನಿನ ತಾಯ್ನಾಡಿನಲ್ಲಿ ಅಸಾಮಾನ್ಯ ಆಚರಣೆಗಳನ್ನು ಪ್ರಚೋದಿಸಿತು. ಅದಕ್ಕೆ ಕಾರಣವೂ ಇದೆ. ಇರಾನ್‌ ನಲ್ಲಿ ಫುಟ್ಬಾಲ್‌ ವ್ಯರ್ಜ್ಯವೇನೂ ಅಲ್ಲ. ಅಲ್ಲಿನ ಜನರೆಲ್ಲಾ ಅಪ್ಪಟ ಫುಟ್ಬಾಲ್‌ ಅಭಿಮಾನಿಗಳು. ವಿಶ್ವಕಪ್‌ ನಲ್ಲಿ ಆಡಲು ಅವಕಾಶ ಪಡೆದ ಏಷ್ಯಾದ ಬೆರಳೆಣಿಕೆ ರಾಷ್ಟ್ರಗಳಲ್ಲಿ ಇರಾನ್‌ ಸಹ ಒಂದು. ಆದರೆ, ಹಿಜಾಬ್‌ ವಿವಾದ ಜನರ ಫುಟ್ಬಾಲ್‌ ಪ್ರೀತಿಯನ್ನು ಮೀರಿ ಅವರನ್ನು ಸಮಾಜ ಮುಖಿಯಾಗಿಸುವಂತೆ ಮಾಡಿದೆ. ಕಟ್ಟರ್‌  ಇಸ್ಲಾಮಿಕ್‌ ಕಬಂಧ ಬಾಹುಗಳನ್ನು ಕಳಚಿಕೊಳ್ಳಲು ಪ್ರತಿಭಟನೆಗಳಲ್ಲಿ ಮುಳುಗಿರುವ ದೇಶವು, ಫುಟ್ಬಾಲ್‌ ವಿಶ್ವಕಪ್‌ ನಲ್ಲಿ ಭಾಗಿಯಾಗಿರುವ ತನ್ನದೇ ರಾಷ್ಟ್ರೀಯ ತಂಡವನ್ನೂ ಸಹ ದಬ್ಬಾಳಿಕೆಯ ಸರ್ಕಾರದ ಒಂದು ಭಾಗವೆಂದು ಪರಿಗಣಿಸುತ್ತದೆ. ಇರಾನ್‌ ಸರ್ಕಾರದ ಅಧೀನದಲ್ಲಿ ಕ್ರಿಡಾಕೂಟದಲ್ಲಿ ಭಾಗಿಯಾದ ಫುಟ್ವಾಲ್‌ ತಂಡವನ್ನು ಸಹ ದ್ವೇಷಿಸುತ್ತಿದ್ದಾರೆ.
ಜನರಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಎಷ್ಟೊಂದು ದ್ವೇಷ ಮಡುಗಟ್ಟಿದೆಯೆಂದರೆ, ಫುಟ್ಬಾಲ್‌ ತಂಡದ ಸೋಲನ್ನು ಸಹ ಇರಾನ್ ಜನರು ಬೀದಿಗಳಲ್ಲಿ ಸಂಭ್ರಮಮಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಇರಾನ್‌ ನಲ್ಲಿ ಪ್ರಕ್ಷುಬ್ಧ ಸ್ಥಿತಿ ಏರ್ಪಟ್ಟಿದ್ದರೂ ಫುಟ್‌ಬಾಲ್ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದನ್ನು ಖಂಡಿಸಿ ಕೆಲದಿನಗಳ ಹಿಂದೆ ಪ್ರತಿಭಟನೆಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ತಂಡ ಹೀನಾಯವಾಗಿ ಸೋತು ವಿಶ್ವಕಪ್‌ ನಿಂದ ಹೊರಬೀಳುತ್ತಿದ್ದಂತೆ ಇರಾನಿಯನ್ನರು ಸಂತೋಷ ಕೂಟ ನಡೆಸುತ್ತಿದ್ದು, ಬೀದಿಗಳಲ್ಲಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಮಹ್ಸಾ ಅಮಿನಿಯ ಕೊಲೆ ಬಳಿಕ ನಡೆದ ಪ್ರತಿಭಟನೆಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ, ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಸೆಪ್ಟೆಂಬರ್‌ನಿಂದ ಕೊಲ್ಲಲ್ಪಟ್ಟರು. ಸೆಪ್ಟೆಂಬರ್ 16 ರಂದು ತನ್ನ ಹಿಜಾಬ್ ಅನ್ನು ಸರಿಯಾದ ರೀತಿಯಲ್ಲಿ ಧರಿಸದ “ಅಪರಾಧ” ಕ್ಕಾಗಿ ಇರಾನ್‌ನ ಕುಖ್ಯಾತ ನೈತಿಕ ಪೊಲೀಸರಿಂದ ಮಹ್ಸಾ ಅಮಿನಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ಸರ್ಕಾರದ ಅಧಿಕಾರವನ್ನು ಪ್ರಶ್ನಿಸಿ ರಾಷ್ಟ್ರದಾದ್ಯಂತ ಪ್ರತಿಭಟನೆಗಳು ನಡೆದಿವೆ.
ಇರಾನಿನ ಫುಟ್ಬಾಲ್ ತಂಡವು ಸಹ ಆಕ್ರೋಶ ವ್ಯಕ್ತಪಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ನವೆಂಬರ್ 22 ರಂದು ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ಪಂದ್ಯದ ಮೊದಲು ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿತು. ಈ ದಂಗೆಯನ್ನು ಕೆಲವರು ಧೈರ್ಯಶಾಲಿ ಎಂದು ಕರೆದರೂ, ಅನೇಕ ಇರಾನಿಯನ್ನರು ಫುಟ್ಬಾಲ್ ತಂಡ ಸರ್ಕಾರದ ಭಾಗ, ಅದು ನಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!