May 31, 2026
Sunday, May 31, 2026
spot_img

ಜನಗಣತಿ ನೆಪ, ಚುನಾವಣೆ ತಾಪ: ಗ್ರೇಟರ್ ಬೆಂಗಳೂರು ಪಾಲಿಕೆಗಳಿಗೆ ಸದ್ಯಕ್ಕಿಲ್ಲವೇ ಎಲೆಕ್ಷನ್ ಭಾಗ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗುತ್ತಿದ್ದ ಮತದಾರರಿಗೆ ಮತ್ತೆ ನಿರಾಸೆಯಾಗುವ ಸಾಧ್ಯತೆ ದಟ್ಟವಾಗಿದೆ. ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜೂನ್ 30ರೊಳಗೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ನಡುವೆಯೂ, ರಾಜ್ಯ ಸರ್ಕಾರವು ಚುನಾವಣೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಕೋರಿದ್ದು, ಅದಕ್ಕೆ ಪ್ರಮುಖವಾಗಿ ‘ಜನಗಣತಿ’ಯ ಅಸ್ತ್ರವನ್ನು ಬಳಸಿದೆ.

ಇಡೀ ಆಡಳಿತ ಯಂತ್ರವು ಜನಗಣತಿ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ನಿಗದಿತ ಸಮಯದಲ್ಲಿ ಇದನ್ನು ಪೂರ್ಣಗೊಳಿಸಬೇಕಿದೆ. ಎಣಿಕೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ ಕೆಲಸಗಳಿಗೆ ಅಪಾರ ಸಿಬ್ಬಂದಿಯ ಅವಶ್ಯಕತೆಯಿದೆ.

ಮತದಾರರ ಪಟ್ಟಿಯ ವಿಶೇಷ ವರಿಷ್ಕರಣೆ ಕಾರ್ಯವೂ ಏಕಕಾಲಕ್ಕೆ ನಡೆಯಬೇಕಿರುವುದರಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಶೈಕ್ಷಣಿಕ ಪರೀಕ್ಷೆಗಳು ನಡೆಯುವುದರಿಂದ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಬೇಕಾಗುತ್ತದೆ.

ಈ ಹಿಂದೆ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಜೂನ್ 30ರೊಳಗೆ ಮುಗಿಸಬೇಕು ಎಂದು ಗಡುವು ನೀಡಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಸಿದ್ಧತೆ ನಡೆಸುತ್ತಿದ್ದ ಆಯೋಗಕ್ಕೆ ಸರ್ಕಾರದ ಈ ಪತ್ರ ಇದೀಗ ಇಕ್ಕಟ್ಟಿಗೆ ಸಿಲುಕಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !