ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಗುರುವಾರ ಸಂಜೆ ಸತತ ಆರನೇ ಬಾರಿಗೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಹಾರ್ಮುಜ್ ಜಲಸಂಧಿಯ ಸಮೀಪವಿರುವ ದಕ್ಷಿಣ ಇರಾನ್‌ನ ಎರಡು ಪ್ರಮುಖ ರಸ್ತೆ ಸೇತುವೆಗಳು, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ. ಹಾರ್ಮುಜ್ಗನ್ ಪ್ರಾಂತ್ಯದ ಸೇತುವೆಗಳ ಮೇಲಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪರಮಾಣು ನಗರಿ ಬುಶೆಹರ್‌ನಲ್ಲಿ ಆತಂಕ
ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವಿರುವ ಪಶ್ಚಿಮದ ಬುಶೆಹರ್ ನಗರದಲ್ಲೂ ಅಮೆರಿಕದ ದಾಳಿಯಿಂದಾಗಿ ಭಾರಿ ಸ್ಫೋಟಗಳು ಸಂಭವಿಸಿದ್ದು, ಇರಾನ್ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ಇರಾನ್ ತಿರುಗೇಟು: ಗಲ್ಫ್ ಮಿತ್ರರಾಷ್ಟ್ರಗಳಿಗೆ ನಡುಕ
ಅಮೆರಿಕದ ಈ ಆಕ್ರಮಣಕ್ಕೆ ಇರಾನ್ ಸಹ ತಕ್ಷಣವೇ ಪ್ರತ್ಯುತ್ತರ ನೀಡಿದೆ. ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮಾಡಿದೆ. ಶುಕ್ರವಾರ ಮುಂಜಾನೆ ಇರಾನ್‌ನ ವೈಮಾನಿಕ ದಾಳಿಗಳನ್ನು ಎದುರಿಸುತ್ತಿರುವುದಾಗಿ ಕುವೈತ್ ಸ್ಪಷ್ಟಪಡಿಸಿದ್ದು, ಇತ್ತ ಬಹ್ರೇನ್‌ನಲ್ಲಿ ಹಠಾತ್ ವಾಯುದಾಳಿ ಮುನ್ನೆಚ್ಚರಿಕೆ ಸೈರನ್‌ಗಳು ಮೊಳಗಿವೆ. ಇಡೀ ಗಲ್ಫ್ ವಲಯ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ.



