ಹೊಸದಿಗಂತ ವರದಿ,ಚಿತ್ರದುರ್ಗ:
ಅಭಿವೃದ್ಧಿಪರ ಭಾರತದ ಗುರಿ ಇಟ್ಟುಕೊಂಡು ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಒಂದು ಅತ್ಯಂತ ಶ್ರೇಷ್ಟ ಬಜೆಟ್ ಎಂದು ಸಂಸದ ಗೋವಿಂದ ಎಂ. ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ ಪೀಳಿಗೆಯ ಜನರ ಆರ್ಥಿಕತೆ, ಉದ್ಯೋಗದ ದೃಷ್ಠಿಯಿಂದ ಬಜೆಟ್ ಮಂಡಿಸಲಾಗಿದೆ. ೪.೧ ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅಗತ್ಯ ಸೌಕರ್ಯಗಳನ್ನು ಹೆಚ್ಚಿಸುವ ಹೊಸ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ೧೦ ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ.
ಪ್ರವಾಹ ನಿರ್ವಹಣೆ ಮಾಡುವ ಮೂಲಕ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಜನರ ಜೀವನಮಟ್ಟ ಸುಧಾರಿಸುವುದು. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಎಸ್.ಸಿ., ಎಸ್.ಟಿ. ಮೂಲಭೂತ ಸೌಕರ್ಯ ಉದ್ಯೋಗ ಸೃಷ್ಟಿಗೆ ಒದಗಿಸಲು ಉದ್ದೇಶಿಸಲಾಗಿದೆ. ಮುದ್ರಾ ಯೋಜನೆಯಡಿ ೧೦ ಲಕ್ಷ ರೂ. ಸಾಲದ ಮಿತಿಯನ್ನು ತೆಗೆದು ಹಾಕಿ ಸಾಲದ ಮೊತ್ತ ಹೆಚ್ಚಳ ಮಾಡಲಾಗಿದೆ. ಇದರಿಂದ ಸಾಮಾನ್ಯ ಹಾಗೂ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಮನೆಗಳ ಸಮಸ್ಯೆ ನಿವಾರಣೆಗೆ ೧೦ ಲಕ್ಷ ಕೋಟಿವರೆಗೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ನಗರ ಪ್ರದೇಶದಲ್ಲಿನ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಣೆ ಮುಂದಿನ ೫ ವರ್ಷಗಳಿಗೆ ಮುಂದುವರಿಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಯಾ ಇಲಾಖೆಗಳ ಕ್ರಿಯಾ ಯೋಜನೆ ಮಾಡುವ ಸಂದರ್ಭದಲ್ಲಿ ಎಲ್ಲ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ರೈಲು ಮಾರ್ಗ ನಿರ್ಮಾಣ, ನೀರಾವರಿ ಯೋಜನೆಗಳ ಜಾರಿ ಹಾಗೂ ಹೆದ್ದಾರಿ ನಿರ್ಮಾಣದಲ್ಲಿ ಈ ಬಾರಿಯ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.