ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಕೋಲದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಸಂಭವಿಸಿ ಒಂದು ವಾರ ಕಳೆದಿದೆ. ಸ್ಥಳದಲ್ಲಿ ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಇಂದು 8ನೆ ಶವ ಪತ್ತೆಯಾಗಿದ್ದು, ಇದು ಓರ್ವ ವೃದ್ದೆಯ ಶವ ಎಂದು ಗುರುತಿಸಲಾಗಿದೆ. ಈ ಮಧ್ಯೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿ ಸಲ್ಲಿಸಲಾಗಿದೆ.
ಘಟನಾ ಸ್ಥಳದಲ್ಲಿ ಲಾರಿಯ ಜಿಪಿಆರ್ಎಸ್ ಲಾಸ್ಟ್ ಲೊಕೇಶನ್ ಪತ್ತೆ ಹಿನ್ನೆಲೆ ಕಾರ್ಯಾಚರಣೆ ಅವೈಜ್ಞಾನಿಕವಾಗಿ, ವಿಳಂಬವಾಗಿ ನಡೀತಿದೆ ಎಂದು ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಆರೋಪಿಸಲಾಗಿದೆ ರಾಜ್ಯ ಸರ್ಕಾರದಿಂದ ಹೈಕೋರ್ಟ್ ವರದಿ ಕೇಳಿದ್ದು, ನಾಳೆ ಈ ಪ್ರಕರಣ ಸಂಬಂಧ ವಿಚಾರಣೆ ನಡೆಯಲಿದೆ.
ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ರಾಡಾರ್ ಮೂಲಕ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್ಗಳು ಇರುವುದು ಪತ್ತೆಯಾಗಿಲ್ಲ.
ಈ ಕಾರಣದಿಂದ ರಸ್ತೆಯ ಬದಿ ಇದ್ದ ಅಂಗಡಿ ನೆಲಸಮವಾದ ಕಡೆ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಗಂಗಾವಳಿ ನದಿಗೆ ಬಿದ್ದ ಮಣ್ಣಿನ ಗುಡ್ಡದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಆರ್ಮಿ ಕಮಾಂಡೋಗಳ ತಂಡ ಶೋಧ ಕಾರ್ಯ ಮುಂದುವರೆಸಿದೆ.