ಹೊಸದಿಗಂತ ವರದಿ,ಚಿತ್ರದುರ್ಗ
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡುವ ವಿಚಾರದಲ್ಲಿ ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ೫೩೦೦ ಕೋಟಿ ರೂ. ಬಿಡುಗಡೆ ಮಾಡಲು ಸಿದ್ಧವಿದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಚಿತ್ರದುರ್ಗದ ಈ ಭಾಗಕ್ಕೆ ಅಪ್ಪರ್ ಭದ್ರಾ ಯೋಜನೆ ಅತೀ ಅವಶ್ಯಕವಾಗಿದೆ. ಯೋಜನೆ ಜಾರಿಯಾಗುವುದರಿಂದ ಲಕ್ಷಾಂತರ ಎಕರೆ ಭೂಮಿ ನೀರಾವರಿಯಾಗಲಿದೆ. ಇದುವರೆಗೂ ರಾಜ್ಯ ಸರ್ಕಾರ ಈ ಯೋಜನೆಗೆ ಖರ್ಚು ಮಾಡಿರುವ ಬಗ್ಗೆ, ಕೇಂದ್ರದ ಜಲಶಕ್ತಿ ಕೇಂದ್ರಕ್ಕೆ ವರದಿ ನೀಡಬೇಕು ಎಂದರು.
ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳಿಂದ ವಿವರಣೆ ಪಡೆದು ಸಂಪೂರ್ಣ ಮಾಹಿತಿ ಕೊಟ್ಟರೆ, ಆಗ ಹಣ ಬಿಡುಗಡೆಯಾಗಲಿದೆ ಎಂದು ದೆಹಲಿಯ ಸಂಸದರ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುವಂತೆ ಆ ಸಭೆಯಲ್ಲಿ ಸಿಎಂಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯ : ರಾಜ್ಯದ ಹಲವೆಡೆಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರೀಯ ವಿದ್ಯಾಲಯಗಳನ್ನು ತೆರೆದಿದೆ. ಆದರೆ ಚಿತ್ರದುರ್ಗದಲ್ಲಿ ಇಲ್ಲ. ಇಲ್ಲಿಗೂ ಸಹ ಕೇಂದ್ರೀಯ ವಿದ್ಯಾಲಯ ತೆರೆಯುವಂತೆ ಕೇಂದ್ರದ ಸಚಿವ ಧರ್ಮೇಂದ್ರ ಕುಮಾರ್ಗೆ ಮನವಿ ಮಾಡಲಾಗಿದೆ. ಈ ಕೇಂದ್ರ ಪ್ರಾರಂಭವಾಗುವುದರಿಂದ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯ ಸಿಗಲಿದೆ. ಚಿತ್ರದುರ್ಗದಲ್ಲಿ ವಿದ್ಯಾಲಯ ಸ್ಥಾಪನೆ ಬಗ್ಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.
ರೈಲು ನಿಲುಗಡೆಗೆ ಮನವಿ : ಚಿತ್ರದುರ್ಗ ರೈಲ್ವೇ ನಿಲ್ದಾಣದಲ್ಲಿ ಹಲವು ರೈಲುಗಳು ಸಂಚರಿಸುತ್ತಿದ್ದು, ಮತ್ತಷ್ಟು ರೈಲುಗಳ ನಿಲುಗಡೆಯಾಗಬೇಕೆಂದು ಪ್ರಯಾಣಿಕರು ಬಯಸಿದ ಹಿನ್ನೆಲೆಯಲ್ಲಿ, ವಾಸ್ಕೋಡಿಗಾಮ ಯಶವಂತ ಪುರ, ಬೆಳಗಾವಿ ವಾಸ್ಕೋಡಿಗಾಮ, ವಿಶ್ವಮಾನವ, ಚಾಲುಕ್ಯ, ಗೋಲುಗುಮ್ಮಟ, ಸೇರಿಂದತೆ ಇತರೇ ರೈಲುಗಳನ್ನು ನಿಲ್ಲಿಸುವಂತೆ ರೈಲ್ವೇ ಸಚಿವ ಆಶ್ವೀನ್ ಹಾಗೂ ಸೋಮಣ್ಣ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ, ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತಿದೆ. ಕೇಂದ್ರದ ಕೆಲವು ಯೋಜನೆಗಳು ನೇರವಾಗಿ ಬರುತ್ತವೆ. ಮತ್ತೆ ಕೆಲವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬರುತ್ತವೆ. ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರ ಶೇ. ೮೦ ರಷ್ಟು ಭೂಮಿ ವಶಪಡಿಸಿಕೊಳ್ಳಬೇಕು. ಹಾಗೂ ಯೋಜನೆಯ ಶೇ.೫೦ ರಷ್ಟು ಹಣವನ್ನು ನೀಡಿದರೆ, ಆಗ ಯೋಜನೆ ಕಾರ್ಯಗತವಾಗಲು ಸಾಧ್ಯ ಎಂದು ಹೇಳಿದರು.
ದಾವಣಗೆರೆ ಮತ್ತು ತುಮಕೂರು ರೈಲ್ವೇ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು, ಯೋಜನೆ ಯಾವ ಸ್ಥಿತಿಯಲ್ಲಿದೆ ಎಂದು ಮಾಹಿತಿ ಪಡೆದು, ಖುದ್ದು ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್, ಸುರೇಶ್ ಸಿದ್ದಾಪುರ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.