ಸಿಎಂ ಖುರ್ಚಿ ಕಿತ್ತಾಟದಿಂದ ರಾಜ್ಯದಲ್ಲಿ ಆಡಳಿತ ಕುಸಿತ: ಸಂಸದ ಕಾರಜೋಳ ವಾಗ್ದಾಳಿ

ಹೊಸದಿಗಂತ ವರದಿ,ಚಿತ್ರದುರ್ಗ

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಕುರ್ಚಿಗಾಗಿ ಗುಂಪುಗಳಾಗಿ ಬಡಿದಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮಗಳಲ್ಲಿ ಹಣದ ಅವ್ಯವಹಾರ ಹೆಚ್ಚಾಗಿದೆ. ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಜಾತಿವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ನಮ್ಮ ಜಾತಿಯವರು ಸಿಎಂ ಆಗಬೇಕೆಂದು ಸ್ವಾಮೀಜಿಗಳೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅರ್ಹತೆ ಮತ್ತು ದಕ್ಷತೆ ಇದ್ದ ವ್ಯಕ್ತಿ ಸಿಎಂ ಆಗಬೇಕು. ಸಿಎಂ ಖುರ್ಚಿ ಮಾರಾಟದ ವಸ್ತುವಲ್ಲ, ಅದು ಶಾಸಕರಿಂದ ಆಯ್ಕೆಯಾಗುವ ಸ್ಥಾನ. ಇದರ ಬಗ್ಗೆ ಬಹಿರಂಗವಾಗಿ ಮಾತಾಡುವುದು ಸರಿಯಲ್ಲ ಎಂದರು.

ಸಿಎಂ ಖುರ್ಚುಗಾಗಿ ದಲಿತ ನಾಯಕರು, ಧ್ವನಿ ಎತ್ತಿದರೆ, ಮತ್ತೊಂದು ಕಡೆ ವೀರಶೈವ ಸಮಾಜ ಧ್ವನಿ ಎತ್ತಿದ್ದು, ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಸಿಎಂ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಸತ್ತ ಪ್ರಾಣಿಯಾಗಿದ್ದು, ಅದನ್ನು ಹರಿದು ತಿನ್ನುವ ರಣಹದ್ದುಗಳಂತೆ ಶಾಸಕರು, ಮಂತ್ರಿಗಳು ಕಚ್ಚಾಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಜನಪರ ಆಡಳಿತ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಹೆಸರಿನಲ್ಲಿ ಗಿಮಿಕ್ ಮಾಡಬಾರದು. ಅವು ಅರ್ಹರಿಗೆ ತಲುಪಬೇಕು. ಬಡವರಿಗೆ ಶಿಕ್ಷಣ ಉದ್ಯೋಗ ಮತ್ತು ಆರೋಗ್ಯ ನೀಡುವ ಕೆಲಸವಾಗಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಇಬ್ಭಾಗ ಮಾಡವುದು ಸಲ್ಲದು : ರಾಜ್ಯವನ್ನು ಇಬ್ಭ್ಬಾಗ ಮಾಡಬೇಕೆಂದು ಚಂದ್ರಶೇಖರ್ ಹೇಳಿಕೆಯನ್ನು ಖಂಡಿಸಿರುವ ಚಿತ್ರದುರ್ಗ ಸಂಸದ ಕಾರಜೋಳ, ಈ ಹಿಂದೆ ಹರಿದು ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಮೂಲಕ ಕರ್ನಾಟಕ ರಾಜ್ಯವನ್ನಾಗಿ ಮಾಡಲಾಗಿದೆ. ಈಗ ಮತ್ತೆ ರಾಜ್ಯ ಇಬ್ಭ್ಬಾಗ ಮಾಡುವ ಹೇಳಿಕೆ ಸರಿಯಲ್ಲ. ರಾಜ್ಯ ಯಾವಾಗಲೂ ಒಂದೇ ಆಗಿರಬೇಕು. ಕರ್ನಾಟಕದ ಏಕೀಕರಣಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಈ ಸಮಯದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅನೇಕರು ಜೈಲು ಸೇರಿದ್ದಾರೆ. ಅವರ ಹೋರಾಟ ಇಂದಿನ ಜನಾಂಗಕ್ಕೆ ಗೊತ್ತಿಲ್ಲ. ಇದನ್ನು ತಿಳಿಯದೆ ರಾಜ್ಯದ ಇಬ್ಭಾಗದ ಮಾತಾಡುತ್ತಿದ್ದಾರೆ ಎಂದರು.
ಯಾವುದೇ ಕಾರಣಕ್ಕೆ ಅಖಂಡ ಕರ್ನಾಟಕ ಒಂದಾಗಿರಬೇಕು. ಯಾರೂ ಕೂಡ ಕರ್ನಾಟಕ ಇಬ್ಭಾಗ ಆಗಬೇಕು ಎಂದು ಧ್ವನಿ ಎತ್ತಬಾರದೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕ ಇತಿಹಾಸವನ್ನು ಓದಬೇಕು. ಈ ದೇಶದ ಸ್ವಾತಂತ್ರ್ಯದ ಬಗ್ಗೆ, ಒಂದಾಗಿರುವ ಬಗ್ಗೆ ಇತಿಹಾಸ ತಿಳಿದುಕೊಳ್ಳಬೇಕು. ೧೯೫೬ ರ ನವೆಂಬರ್‌ನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಅದು ಮುಂದುವರೆಯಬೇಕು. ಚಿತ್ರದುರ್ಗ ಸೇರಿದಂತೆ ಹೈದ್ರಾಬಾದ್, ಕರ್ನಾಟಕಕ್ಕೆ ಅಭಿವೃದ್ದಿಯಲ್ಲಿ ಮಲತಾಯಿ ಧೋರಣೆಯಿಂದ ಅನ್ಯಾಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಿಲ್ಲ ಎಂದು ಹೇಳಿದರೆ, ಕೆಲವರಿಗೆ ಮೂಗಿನ ಮೇಲೆ ಕೋಪ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ಟಿ ನಿಗಮದ ಹಗರಣದ ಬಗ್ಗೆ : ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡು, ಖಜಾನೆ ಲೂಟಿ ಮಾಡಿದೆ ಎಂದು ಜನರ ಅಭಿಪ್ರಾಯವಾಗಿದೆ. ಖಜಾನೆ ಲೂಟಿ ಮಾಡಿದವರು, ಸಮಾಜದ ಹೊರಗೆ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಅದಕ್ಕೆ ಸರ್ಕಾರದ ಕೈವಾಡ ಇದೆ ಎಂದು ಸ್ಪಷ್ಟವಾಗಿ ರಾಜ್ಯದ ೬.೫ ಕೋಟಿ ಜನರಿಗೆ ಗೊತ್ತಾಗಿದೆ. ಸರ್ಕಾರ ಕೂಡಲೇ ೧೮೭ ಕೋಟಿ ಹಣವನ್ನು ಸರ್ಕಾರದ ಖಜಾನೆಗೆ ತೆಗೆದುಕೊಂಡು ದಲಿತರ ಉದ್ಧಾರಕ್ಕಾಗಿ ವೆಚ್ಚ ಮಾಡಬೇಕು. ಸಂಬಂಧಪಟ್ಟವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೇ ರಾಜ್ಯದ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!