ಹೊಸದಿಗಂತ ವರದಿ, ಯಲಬುರ್ಗಾ:
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 4 ರಲ್ಲಿ ಬರುವ ರೈತರಾದ ಶರಣಮ್ಮ ರೊಟ್ಟಿಯವರ ಜಮೀನಿಗೆ ಕೇಂದ್ರ ತಂಢ ಬೇಟಿ ನೀಡಿ ಸಜ್ಜೆ ಬೆಳೆ ಪರಿಶೀಲಿಸಿದರು.
ಕಳೆದ ಬಾರಿ ಚೆನ್ನಾಗಿ ಬೆಳೆ ಬಂದಿದ್ದು, ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿದೆ. ಈ ಜಮೀನು ನಂಬಿಕೊಂಡು ನಮ್ಮ ಕುಟುಂಬ ಸಾಗಿಸುತ್ತಿದ್ದೇವೆ. ಸರ್ಕಾರ ನಮ್ಮ ನಷ್ಟ ಪರಿಹಾರ ಕೊಡಬೇಕು ಎಂದು ರೈತರಾದ ಶರಣಮ್ಮ ಅಳಲು ತೊಡಿಕೊಂಡರು.
ಈ ಬಾರಿಯ ಮುಂಗಾರಿಗೆ ಎಷ್ಟು ಹಣ ಖರ್ಚು ಮಾಡಿ ಬಿತ್ತನೆ ಮಾಡಿರುವುದಾಗಿ ಕೇಂದ್ರ ತಂಡವು ರೈತರಿಗೆ ಕೇಳಿದಾಗ 16-20 ಸಾವಿರ ಖರ್ಚು ಮಾಡಿದ್ದೇವೆ. ಮಳೆ ಬಾರದ ಕಾರಣ ಫಸಲು ಬರಲಿಲ್ಲ ಎಂದು ವಿವರಿಸಿದರು.
ಸರ್ವೆ ನಂಬರ್ 4 ಮತ್ತು 3 ರಲ್ಲಿ ಬರುವ ಜಮೀನು ಶಶಿಕಲಾ ಶರಣಪ್ಪ ರೊಟ್ಟಿಯವರ ಸಜ್ಜೆ ಹಾಗೂ ಮೆಕ್ಕೆಜೋಳ ಬೆಳೆ ಹಾಳಾಗಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಇದ್ದರು.