June 20, 2026
Saturday, June 20, 2026
spot_img

ವಿದ್ಯಾರ್ಥಿಗಳ ಸರಣಿ ಸಾ*ವುಗಳಿಗೆ ಕೇಂದ್ರವೇ ಹೊಣೆ: ನೀಟ್ ಗೊಂದಲ ಖಂಡಿಸಿ ಬೀದಿಗಿಳಿದ ಸ್ಟೂಡೆಂಟ್ಸ್

ಹೊಸದಿಗಂತ ವರದಿ ಚಿತ್ರದುರ್ಗ:

ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಖಂಡಿಸಿ ಶನಿವಾರ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಲಾಯಿತು. ನಗರದ ಡಿಸಿ ಸರ್ಕಲ್‌ನಲ್ಲಿ ಸೇರಿದ ವಿದ್ಯಾರ್ಥಿಗಳು ಎನ್‌ಟಿಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಮೇ 3 ರಂದು ನಡೆದ ನೀಟ್ ಪ್ರಶ್ನೆಪತ್ರಿಕೆಯು ಮುಂಚಿತವಾಗಿಯೇ ಟೆಲಿಗ್ರಾಮ್‌ನಲ್ಲಿ ಹರಿದಾಡಿತ್ತು. ಇಷ್ಟಾಗಿಯೂ ಎನ್‌ಟಿಎ ಪರೀಕ್ಷೆ ನಡೆಸಿತು. ಇದಾದ ಕೆಲವೇ ದಿನಕ್ಕೆ ಪರೀಕ್ಷೆ ರದ್ದುಗೊಳಿಸಲಾಯಿತು. ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಯಿತು. ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಬೇಜವಾಬ್ದಾರಿತನದಿಂದ ಆಘಾತಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಜೂನ್ 21ರ ಮರುಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಈ ಆತ್ಮಹತ್ಯೆಗಳು ಸಾಂಕ್ರಾಮಿಕವಾಗಿ ಹೆಚ್ಚುತ್ತಿವೆ. ಕಳೆದ 3 ದಿನದಲ್ಲಿ 7 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಇಲ್ಲಿಯವರೆಗೂ ದೇಶದವ್ಯಾಪಿ 16 ವಿದ್ಯಾರ್ಥಿಗಳು ಜೀವ ತೊರೆದಿದ್ದಾರೆ. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ರೈತರ ಆತ್ಮಹತ್ಯೆಗಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿವೆ. ಇವು ಆತ್ಮಹತ್ಯೆಯಲ್ಲ. ಸರ್ಕಾರ ಮತ್ತು ವ್ಯವಸ್ಥೆ ನಡೆಸಿದ ನರಮೇಧ ಎಂದು ಉಗ್ರವಾಗಿ ಖಂಡಿಸಿದರು.

ಇದನ್ನೂ ಓದಿ:

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಸರ್ಕಾರ ತನ್ನ ವೈಫಲ್ಯವನ್ನು ಸರಿಪಡಿಸಿಕೊಳ್ಳದೇ ಟೆಲಿಗ್ರಾಮ್ ಬ್ಯಾನ್ ಮಾಡಿದೆ. ಇದೀಗ ಸುತ್ತೋಲೆ ಹೊರಡಿಸಿರುವ ಎನ್‌ಎಂಸಿ ದೇಶಾದ್ಯಂತ ಯಾವ ಮೆಡಿಕಲ್ ವಿದ್ಯಾರ್ಥಿಗಳಿಗೂ ಇಂದು ಮತ್ತು ನಾಳೆ ರಜೆ ಪಡೆಯದಂತೆ ಆದೇಶ ಹೊರಡಿಸಿದೆ. ಕೋಚಿಂಗ್ ಮಾಫಿಯಾದೊಂದಿಗೆ ಶಾಮಿಲಾಗಿರುವ ವ್ಯವಸ್ಥೆಯು ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ನೀಟ್ ಪೇಪರ್ ಸೋರಿಕೆಯ ಗೂಬೆ ಕೂರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂದು ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ನಾಶವಾಗಿದೆ. ನೀಟ್ ಆರಂಭಿಸಿರುವುದೇ ಕೋಚಿಂಗ್ ಮಾಫಿಯಾಗಳ ವ್ಯಾಪಾರಕ್ಕೆ ಎಂಬಂತಾಗಿದೆ ಎಂದು ದೂರಿದರು.

ಕೋಚಿಂಗ್ ಇಲ್ಲದೇ ನೀಟ್ ನಲ್ಲಿ ಸ್ಪರ್ಧಿಸಲಾಗದು. ಕೋಚಿಂಗ್‌ಗಾಗಿ ಲಕ್ಷಾಂತರ ರೂ ಖರ್ಚು ಮಾಡಬೇಕು. ವಾರ್ಷಿಕ 1.4 ಲಕ್ಷ ಕೋಟಿಯಿರುವ ದೇಶದ ಶಿಕ್ಷಣ ಬಜೆಟ್‌ಗೆ ಸಮಾನವಾಗಿ ದೇಶದ ಪಾಲಕರು ನೀಟ್ ಕೋಚಿಂಗಿಗೆ ಹಣ ಸುರಿಯಬೇಕಿದೆ. ಈ ವೆಚ್ಚ ಬರಿಸಲಾಗದ ಬಡಮಕ್ಕಳ ವೈದ್ಯಕೀಯದ ಕನಸನ್ನು ವ್ಯವಸ್ಥೆ ಕೊಂದಿದೆ. ವೈದ್ಯಕೀಯ ಶಿಕ್ಷಣವೇ ಇಷ್ಟು ದುಬಾರಿಯಾದಾಗ ವೈದ್ಯಕೀಯವು ಸೇವೆಯಾಗಿ ಉಳಿಯಲು ಸಾಧ್ಯವಿಲ್ಲ. ಕೇವಲ ಹಣವಂತರಿಗಷ್ಟೇ ಮೀಸಲಿಟ್ಟು ಅತ್ಯಂತ ವ್ಯವಸ್ಥಿತವಾಗಿ ಬಡವರಿಂದ ವೈದ್ಯಕೀಯ ಶಿಕ್ಷಣ ಮತ್ತು ಸೇವೆಯನ್ನು ಕಸಿಯಲಾಗಿದೆ ಎಂದು ಆರೋಪಿಸಿದರು.

ಎಐಡಿಎಸ್‌ಓ ಜಿಲ್ಲಾ ಸಂಚಾಲಕ ಕೆ.ಈರಣ್ಣ, ಸದಸ್ಯರಾದ ಪ್ರಹ್ಲಾದ್ ಸೇರಿದಂತೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !