ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆ, ಕೇಂದ್ರ ಸರ್ಕಾರ ತುರ್ತು ಕ್ರಮವಾಗಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಗೆ ತಾತ್ಕಾಲಿಕ ಅನುಮತಿ ನೀಡಿದೆ.
ಹಿಂದೆ ಸೀಮೆಎಣ್ಣೆ ಮುಕ್ತ ಎಂದು ಘೋಷಿಸಿದ್ದ ಈ ಪ್ರದೇಶಗಳಲ್ಲಿ ಇದೀಗ 60 ದಿನಗಳ ಕಾಲ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಮನೆಗಳಿಗೆ ಸೀಮೆಎಣ್ಣೆ ಪೂರೈಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪೆಟ್ರೋಲಿಯಂ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ಸೀಮೆಎಣ್ಣೆ ಸಂಗ್ರಹಿಸಿ ವಿತರಿಸಲು ಅನುಮತಿ ನೀಡಲಾಗಿದೆ. ಪ್ರತಿ ಕೇಂದ್ರದಲ್ಲಿ 5,000 ಲೀಟರ್‌ವರೆಗೆ ಸಂಗ್ರಹಿಸಬಹುದಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಎರಡು ವಿತರಣಾ ಕೇಂದ್ರಗಳನ್ನು ಗುರುತಿಸಲು ಅವಕಾಶ ಇದೆ. ಎಲ್‌ಪಿಜಿ ಲಭ್ಯತೆಯ ಬಗ್ಗೆ ಜನರಲ್ಲಿ ಆತಂಕ ಮೂಡದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಇದರ ಜೊತೆಗೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಖರೀದಿಗೆ ಜನರು ಮುಗಿಬೀಳಬಾರದು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶದಲ್ಲಿ ಸುಮಾರು 60 ದಿನಗಳ ಮಟ್ಟಿಗೆ ಇಂಧನ ಸಂಗ್ರಹ ಲಭ್ಯವಿದ್ದು, ಪೂರೈಕೆ ವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನೊಂದೆಡೆ, ಯುದ್ಧದ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಎಂಎಸ್‌ಎಂಇ ಸೇರಿದಂತೆ ಆರ್ಥಿಕವಾಗಿ ದುರ್ಬಲ ವಲಯಗಳಿಗೆ ವಿಶೇಷ ಕೇಂದ್ರ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಹಣದುಬ್ಬರ ಮತ್ತು ಉತ್ಪಾದನಾ ವೆಚ್ಚದ ಒತ್ತಡ ತಗ್ಗಿಸಲು ಸರ್ಕಾರ ಇನ್ನಷ್ಟು ಪರಿಹಾರ ಕ್ರಮಗಳತ್ತ ಗಮನ ಹರಿಸಿದೆ.



