September 29, 2026
Tuesday, September 29, 2026
spot_img

ತಮಿಳುನಾಡು ಚುನಾವಣೆ ಗೆಲುವಿಗೆ ರಣತಂತ್ರ: ಗೆದ್ದರೆ ಟಿವಿ, ಮಿಕ್ಸಿ ಅಲ್ಲ 8 ಸಾವಿರದ ಕೂಪನ್ ಘೋಷಿಸಿದ ಸ್ಟಾಲಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದ ಆಡಳಿತರೂಢ ಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೇರಲು ರಣತಂತ್ರ ರೂಪಿಸಿದ್ದು, ಮತ್ತೆ ಗೆದ್ದರೆ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಸಹಿತ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ‘ಸೂಪರ್‌ಸ್ಟಾರ್’ ಆಗಿದೆ ಎಂದು ಹೇಳಿದರು. ಅದರಲ್ಲೂ ಈ ಬಾರಿ ಹೊಸದಾಗಿ ಮಹಿಳೆಯರಿಗೆ ‘ಇಲ್ಲಥರಸಿ’ ಯೋಜನೆ ಘೋಷಿಸಿದ್ದು, ಹೊಸ ಖರೀದಿ ಅಥವಾ ಗೃಹೋಪಯೋಗಿ ವಸ್ತುಗಳನ್ನು ಬದಲಾಯಿಸಲು ರೂ. 8,000 ಮೌಲ್ಯದ ಕೂಪನ್ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನು 8ನೇ ತರಗತಿ ವರೆಗೆ ಶಾಲೆಗಳಲ್ಲಿ ಉಪಾಹಾರ ಯೋಜನೆ ವಿಸ್ತರಿಸುವುದು ಮತ್ತು ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಬ್ಸಿಡಿ ಮತ್ತು 5 ಲಕ್ಷದವರೆಗೆ ಬ್ಯಾಂಕ್ ಸಾಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹೆಣ್ಣು ಮಕ್ಕಳಿಗೆ ನೀಡುವ ಮಾಸಿಕ ಉನ್ನತ ಶಿಕ್ಷಣ ಸಹಾಯ ಧನವನ್ನು ರೂ. 1,000 ರಿಂದ ರೂ. 1,500 ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದು, ವೃದ್ಧರ ಪಿಂಚಣಿಯನ್ನು 1,200 ರೂ.ಗಳಿಂದ 2,000 ರೂ.ಗಳಿಗೂ , ಅಂಗವಿಕಲರ ಪಿಂಚಣಿಯನ್ನು 1,500 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

Must Read