ಹೊಸದಿಗಂತ ವರದಿ ವಿಜಯಪುರ:
ಚಕ್ರವರ್ತಿ ಸೂಲಿಬೆಲೆ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತೇವೆ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಗ್ಯಾರಂಟಿ ಎಂದು ಸಚಿವ ಎಂ.ಬಿ. ಪಾಟೀಲ ಎಚ್ಚರಿಸಿದರು.
ಕಾಂಗ್ರೆಸಿನದ್ದು ಹಿಟ್ಲರ್ ಸರ್ಕಾರ ಎಂದು ಆರೋಪಿಸಿದ ಸೂಲಿಬೆಲೆ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನ್ ಮಾಡಿದ್ದಾರೆ ಕೇಳಿ, ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ದೂರಿದರು.
ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಅಂತೇಳಿ ನಾಟಕ ಮಾಡಿದ್ದರು. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಗ್ಯಾರಂಟಿ ಎಂದರು.
ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ರೋಸಿಹೋದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ ಎಂದು ತಿಳಿಸಿದರು.
ಐಟಿ ಬಿಟಿಯಲ್ಲಿ ಇಂದು ಕರ್ನಾಟಕ ದೇಶದಲ್ಲಿಯೇ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ನಂ.1 ಸ್ಥಾನ ಆಗ್ತಾ ಇದೆ. ಆದರೆ ಉತ್ಪಾದನೆ ಕ್ಷೇತ್ರದಲ್ಲಿಯೂ ಬಹಳಷ್ಟು ಸಾಧನೆ ಮಾಡಬೇಕಾಗಿದೆ ಎಂದು ಹೇಳಿದರು.
ಕರ್ನಾಟಕದ ಎಲ್ಲ ಜಿಲ್ಲೆಯಲ್ಲಿ ಕೈಗಾರಿಕೆಗಳು ನಿರ್ಮಾಣವಾಗಿ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಾನು ಬೃಹತ್ ಕೈಗಾರಿಕೆ ಇಲಾಖೆ ಅಡಿಯಲ್ಲಿ ಬರುವ ನಿಗಮಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲೆಗಳು, ರಾಜ್ಯ ಸಮಗ್ರ ಅಭಿವೃದ್ಧಿಯಾಗಬೇಕು ಎಂದರು.