ಚಾಮುಂಡಿಬೆಟ್ಟ ನಮ್ಮ ಆಸ್ತಿ, ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಬಿಡಲ್ಲ: ಪ್ರಮೋದಾದೇವಿ ಒಡೆಯರ್

ಹೊಸದಿಗಂತ ವರದಿ,ಮೈಸೂರು:

ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಆ ದೇವಸ್ಥಾನವನ್ನು ನಮ್ಮ ಮಹಾರಾಜರು ನಿರ್ಮಿಸಿದ್ದಾರೆ. ಹೀಗಾಗಿ ಸರ್ಕಾರ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.

ಈ ಸಂಬoಧ ಮೈಸೂರಿನ ಅರಮನೆಯಲ್ಲಿ ಸೋಮವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ. ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ ಪ್ರದೇಶ ಸೇರಿದೆ. ದೇವಸ್ಥಾನ ಸಂಬoಧ ೨೦೦೧ರಲ್ಲಿ ಮುಜರಾಯಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣ ಕೋರ್ಟ್ನಲ್ಲಿ ಇರುವಾಗ ರಾಜ್ಯ ಸರ್ಕಾರ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ. ಕೋರ್ಟ್ ಬರಿ ಸ್ಟೇಟಸ್ ಕೋ ಕೊಟ್ಟಿಲ್ಲ, ಪ್ರಾಧಿಕಾರವೇ ಜಾರಿಯಲ್ಲಿ ಇರೋದಿಲ್ಲ. ೧೯೫೦ರಲ್ಲೇ ನಮ್ಮ ಸಂಸ್ಥಾನದಿoದ ಖಾಸಗಿ ಆಸ್ತಿಗಳ ಪಟ್ಟಿ ಕೊಟ್ಟಿರೋದು. ಕೇಂದ್ರ ಸರ್ಕಾರ ೧೯೭೨ರಲ್ಲಿ ಮಾಡಿರುವ ಆದೇಶದ ಪ್ರಕಾರ ಅವುಗಳನ್ನು ನಾವು ಅನುಭವಿಸಬಹುದು ಎಂದು ತಿಳಿಸಿದ್ದಾರೆ.

ಈಗ ನಾವು ನಿರ್ವಹಣೆ ಮಾಡೋ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ನ್ಯಾಯಾಲಯ, ಸರ್ಕಾರ ಈಗಲೂ ಗ್ರೀನ್ ಸಿಗ್ನಲ್ ಕೊಟ್ಟರೆ, ಚಾಮುಂಡಿ ಬೆಟ್ಟವನ್ನ ನಾವೇ ನಿರ್ವಹಣೆ ಮಾಡ್ತೇವೆ. ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಿಕೋಳ್ಳಬೇಕು ಅನ್ನೋದು ನಮ್ಮ ವಾದ. ಸರ್ಕಾರಿ ಖರಾಬು ಅಂತ ಚಾಮುಂಡಿ ಬೆಟ್ಟವನ್ನು ಮಾಡಲು ಆಗೋದಿಲ್ಲ. ಕೇವಲ ಖರಾಬು ಅಂತಾ ಮಾತ್ರವೇ ಇದೆ, ಆದ್ರೆ ಸರ್ಕಾರಿ ಖರಾಬು, ಅ ಖರಾಬು ಬಿ ಖರಾಬು ಅಂತಾ ಇಲ್ಲ ಎಂದು ಮಾಹಿತಿ ನೀಡಿದರು.

ಪ್ರಾಧಿಕಾರದ ಹೆಸರಲ್ಲಿ ಸರ್ಕಾರ ರೂಲಿಂಗ್ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದ ಖಾಸಗಿ ಪ್ರಾಪರ್ಟಿ ಯಾವುದು ಅಂತಾ ರಾಜ್ಯ ಸರ್ಕಾರಕ್ಕೆ ಗೊತ್ತಿದೆ. ೨೦೦೧ರ ಕೇಸ್ ಪೆಂಡಿಗ್ ಇದೆ, ಇದಕ್ಕೂ ಮೊದಲೇ ಪ್ರಾಧಿಕಾರ ರಚನೆ ಏಕೆ? ೨೦೦೧ರ ಕೇಸ್ ಕ್ಲಿಯರ್ ಆಗಲಿ. ೧೯೭೪ರಲ್ಲಿ ನಿರ್ವಹಣೆ ಮಾಡಲು ಕಷ್ಟ ಅಂತಾ ಪತ್ರ ಬರೆದಿದ್ದು ನಿಜ. ಅಂದು ಬೇರೆ ಬೇರೆ ಕಾರಣ ಇತ್ತು. ಆ ರೀತಿ ಮ್ಯಾನೇಜ್ ಮಾಡಿ ಅಂತಾ ಕೊಟ್ಟಾಗ ನಿರ್ವಹಣೆ ಮಾಡಲಿ. ಆದರೆ ನೀವೇ ಸ್ವಂತ ಮಾಡಿಕೊಳ್ಳಿ ಅಂತಾ ನಾವು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

೨೦೦೧ರ ಕೇಸ್‌ನ ತೀರ್ಪು ನಮ್ಮ ಪರ ಬಂದರೆ ನಾವೇ ನಿರ್ವಹಿಸುತ್ತೇವೆ. ಪೂರ್ವಜರ ಹಾದಿಯಲ್ಲೇ ಸಾಗುತ್ತಿದ್ದೇವೆ, ಬೇರೆ ಮಾರ್ಗದಲ್ಲಿ ಹೋಗಲ್ಲ. ಚಾಮುಂಡಿಬೆಟ್ಟ ಉಳಿಸಿಕೊಳ್ಳಲು ಹೊರಟಿದ್ದೇವೆ, ಬೆಟ್ಟ ಬೆಟ್ಟದ ರೀತಿ ಇರಲಿ. ವಯನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ. ೧೯೫೦ರಲ್ಲಿ ಖಾಸಗಿ ಪ್ರಾಪರ್ಟಿ ಲಿಸ್ಟ್ ಮಾಡಿದ್ದರು, ಖರಾಬು ಇರಲಿ ಏನೇ ಇರಲಿ, ಆವಾಗ ಲಿಸ್ಟ್ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೇನೂ ನಾವು ಇಟ್ಟುಕೊಂಡಿಲ್ಲ. ಬೇರೆ ಏನನ್ನೂ ಕೇಳುತಿಲ್ಲ, ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನು ಕೇಳಿದ್ದೇವಾ? ಸರ್ಕಾರ ಬದಲಾದಾಗ ಪರಿಸ್ಥಿತಿ ಸಹ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರುವುದು ಸರಿಯಿಲ್ಲ, ಸರ್ಕಾರದ ಈ ನಡೆ ಸರಿಯಿಲ್ಲ ಎಂದರು.
ನಮ್ಮ ಖಾಸಗಿ ಆಸ್ತಿಗಳ ರಕ್ಷಣೆಗಾಗಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವ ಬೀರುವುದಿಲ್ಲ. ನನ್ನ ಪತಿ ನಾಲ್ಕು ಬಾರಿ ಸಂಸದರಾಗಿದ್ದರು. ಆಗಲೂ ಅವರು ರಾಜಕೀಯವಾಗಿ ಪ್ರಭಾವ ಬೀರಲಿಲ್ಲ. ಯಾವುದೇ ಅಧಿಕಾರಿಗಳ ಬಳಿ ನಮ್ಮ ಆಸ್ತಿ ರಕ್ಷಣೆಗಾಗಿ ಪ್ರಭಾವ ಬೀರಲಿಲ್ಲ. ಈಗ ನನ್ನ ಮಗ ಸಂಸದನಾಗಿದ್ದಾರೆ. ಅವರ ಮೂಲಕವೂ ನಾನು ಪ್ರಭಾವ ಬೀರುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ. ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!