ಹೊಸದಿಗಂತ ವರದಿ,ತುಮಕೂರು:
ಶಾಲಾ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಈಗಾಗಲೇ 12 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದ್ದು, ಹೆಚ್ಚುವರಿಯಾಗಿ ಇನ್ನು 12 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು, ಶಿಕ್ಷಣ ಇಲಾಖೆಯ ಸುಧಾರಣೆಗೆ ಈಗಾಗಲೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೆ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗಿದ್ದು ಇನ್ನೂ 12 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷಾರಂಭ್ಕೆ ಮುನ್ನವೇ 50 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಅಲ್ಲದೆ ಅನುದಾನಿತ ಶಾಲೆಗಳಲ್ಲಿ ಐದು ವರ್ಷಗಳಿಂದಲೂ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 2ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದ್ದು 1008 ಅಂಗನವಾಡಿಗಳಲ್ಲಿ ಎಲ್ ಕೆ ಜಿ – ಯು ಕೆ ಜಿ ಆರಂಭಿಸಲಾಗಿದೆ. ಕೇವಲ 28 ದಿನಗಳಲ್ಲಿ 32ಸಾವಿರ ಮಕ್ಕಳು ದಾಖಲಾಗುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದರು.
ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ನಿಟ್ಟನಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಷನ್ ಅವರೊಂದಿಗೆ 1500ಕೋಟಿ ವೆಚ್ವದ ಯೋಜನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ನೀಡಲಾಗುವುದು ಎಂದರು.
ಪೋಷಕರು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳಿಸಬೇಕು. ಇದರಿಂದ ಸರ್ಕಾರದ ಈ ಯೋಜನೆಗಳು ಸಾರ್ಥಕತೆಪಡೆಯುತ್ತವೆ ಎಂದರು.
ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಾಲಾ ಶಿಕ್ಷಕರು ವಾರಕ್ಕೊಮ್ಮೆ ವಿಶೇಷ ತರಗತಿ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.