ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ದಾರೋ ಮತ್, ಭಾಗೋ ಮತ್’ ಎಂದು ರಾಹುಲ್ ಗಾಂಧಿಯನ್ನು (Rahul Gandhi) ಲೇವಡಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ಚೆಸ್ ಮತ್ತು ರಾಜಕೀಯದ ಅನುಭವಿ ಆಟಗಾರನಾಗಿ ರಾಯ್ ಬರೇಲಿಯಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಚೆನ್ನಾಗಿ ಯೋಚಿಸಿ, ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ರಾಜಕೀಯ ಮತ್ತು ಚದುರಂಗದ ಅನುಭವಿ ಆಟಗಾರ. ಕಾಂಗ್ರೆಸ್ ಪಕ್ಷದ ನಾಯಕತ್ವವು ಹೆಚ್ಚಿನ ಚರ್ಚೆಯ ನಂತರ ಮತ್ತು ದೊಡ್ಡ ಕಾರ್ಯತಂತ್ರದ ಭಾಗವಾಗಿ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಬಿಜೆಪಿಯ ಸ್ವಯಂಘೋಷಿತ ಚಾಣಕ್ಯ ಈಗ ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಾವೂ ಕಾಯುತ್ತಿದ್ದೇವೆ ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ರಾಯ್ ಬರೇಲಿಯನ್ನು ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಪ್ರತಿನಿಧಿಸಿದ್ದಾರೆ. ಅದು ‘ಅನುವಂಶಿಕತೆಯಲ್ಲ, ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕೇವಲ ಅಮೇಥಿ-ರಾಯ್ಬರೇಲಿ ಮಾತ್ರವಲ್ಲ, ಉತ್ತರದಿಂದ ದಕ್ಷಿಣದವರೆಗೆ ಇಡೀ ದೇಶವು ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ. ರಾಹುಲ್ ಗಾಂಧಿ ಉತ್ತರ ಪ್ರದೇಶದಿಂದ 3 ಬಾರಿ ಮತ್ತು ಕೇರಳದಿಂದ ಒಮ್ಮೆ ಸಂಸದರಾಗಿದ್ದಾರೆ. ಆದರೆ, ಪ್ರಧಾನಿ ಮೋದಿ ಈ ರೀತಿಯ ಬದಲಾವಣೆಯ ಸವಾಲನ್ನು ಸ್ವೀಕರಿಸಿದ್ದಾರೆಯೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದರು.