ಹೊಸದಿಗಂತ ವರದಿ,ಕಲಬುರಗಿ:
ಕೃಷಿ ವಿಜ್ಞಾನಿ ಹಾಗೂ ಧಾರವಾಡ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಎ.ಪಾಟೀಲ್ (೮೦) ಅವರು ಸೋಮವಾರ ತಮ್ಮ ಕಲಬುರಗಿ ನಗರದ ನಿವಾಸದಲ್ಲಿ ಕೊನೆಯುಸಿರೆಳೆದರು.
ಕೃಷಿ ಕ್ಷೇತ್ರಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿರುವ ಡಾ.ಎಸ್.ಎ.ಪಾಟೀಲ್, ಕರ್ನಾಟಕ ಕೃಷಿ ಮಿಷನ್ ಮಾಜಿ ಚೇರಮನ್ ಆಗಿ, ನವದೆಹಲಿಯ ಅಗ್ರಿಕಲ್ಚರ್ ರಿಸರ್ಚ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿ,ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವೈಸ್ ಚೇರಮನ್ ಆಗಿ ಸೇವೆ ಸಲ್ಲಿಸಿದ್ದರು .
ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗೌಡರು ಎಂದೆ ಪ್ರಸಿದ್ದಿಯಾಗಿದ್ದ ಕೃಷಿ ವಿಜ್ಙಾನಿ ಡಾ.ಎಸ್.ಎ.ಪಾಟೀಲ ಅವರು ಭಗವತಿ ನಗರದಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದು, ಅವರ ನಿಧನದಿಂದ ಗ್ರಾಮಕ್ಕೆ ಅಷ್ಟೆ ಅಲ್ಲದೆ ರಾಜ್ಯಕ್ಕೂ ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ.ಎಸ್.ಎ.ಪಾಟೀಲ್ ಮೂಲತ: ಕೃಷಿ ಕುಟುಂಬದಿಂದ ಬಂದಿದ್ದು, ಎಂ.ಎಸ್ಸಿ (ಕೃಷಿ) ಹಾಗೂ ಜೆನೆಟಿಕ್ ಮತ್ತು ಪ್ಲಾಂಟ್ ಬ್ರೀಡಿಂಗ್ ವಿಷಯದಲ್ಲಿ ಪಿ.ಹೆಚ್‌ಡಿ ಮಾಡಿ ರಾಯಚೂರಿನ ವಲಯ ಸಂಶೋಧನಾ ಕೇಂದ್ರದಲ್ಲಿ ಸಹ ಸಂಶೋಧನಾ ನಿರ್ದೇಶಕರಾಗಿ ಹಂತ ಹಂತವಾಗಿ ಬೆಳೆದು ಸಂಶೋಧನಾ ನಿರ್ದೇಶಕರಾಗಿ, ಡೀನ್‌ರಾಗಿ ಎರಡು ಬಾರಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಐ.ಎ.ಆರ್.ಐ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)ಯ ನಿರ್ದೇಶಕರಾಗಿ, ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ಕೃಷಿ ಮಿಷನ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿ ರೈತರ ಸ್ನೇಹಿ ಕೃಷಿ ವಿಜ್ಞಾನಿ ಎಂದು ರೈತರ ಮನವನ್ನು ಗೆದಿದ್ದರು. ಇವರ ಕುಲಪತಿಯ ಅವಧಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಅತ್ಯುನ್ನತ ವಿಶ್ವವಿದ್ಯಾಲಯವೆಂದು ಬೆಳೆಸಿ ಧಾರವಾಡದಲ್ಲಿ ಅನೇಕ ನೂತನ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ದೇಶದಲ್ಲಿಯೇ ಪ್ರಥಮ ಬಾರಿಗೆ ಬೀಜ ಗ್ರಾಮ ಯೋಜನೆಯನ್ನು ಹುಟ್ಟುಹಾಕಿ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವಲ್ಲಿ ನಿರಂತರ ಶ್ರಮಿಸಿದ್ದರು.
ಡಾ.ಎಸ್.ಎ.ಪಾಟೀಲ್ ಅವರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.ಜುಲೈ ೧೭ ರಂದು ಅಂತ್ಯಕ್ರಿಯೆ ನೆರವೆರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.