ಜ.15ರಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ: ಎಂ.ಬಿ.ದೇವಯ್ಯ

ಹೊಸದಿಗಂತ ವರದಿ ಮಡಿಕೇರಿ:

ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10ನೇ ವರ್ಷದ ‘ಚಂಡಿಕಾ ಹೋಮ’ ಭಾಗಮಂಡಲದ ಟ್ರಸ್ಟ್’ನ ಜಾಗದಲ್ಲಿ ಜ.15 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್’ನ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಅಂದು ಸುಬ್ರಹ್ಮಣ್ಯ ಬಳ್ಕೂರಾಯ ಅವರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆಯೆಂದು ತಿಳಿಸಿದರು.

ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್’ನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪುರಾಣಗಳಲ್ಲಿ ಪ್ರಸ್ತಾಪವಾಗಿರುವಂತೆ ಅಗಸ್ತ್ಯ ಮುನಿಗಳು ಮತ್ತು ಕಾವೇರಿಯ ನಡುವೆ ಕಲಹವೇರ್ಪಟ್ಟಾಗ ಕಾವೇರಿಯ ಪರವಾಗಿ ನಿಂತ ಕೊಡವರಿಗೆ ಮತ್ತು ಅಮ್ಮ ಕೊಡವರಿಗೆ ಅಗಸ್ತ್ಯ ಮುನಿಗಳು ಶಾಪ ನೀಡಿದ್ದರು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕ್ರಮಗಳಂತೆ ಕಾವೇರಿಯ ಕ್ಷೇತ್ರದಲ್ಲಿ ‘ಚಂಡಿಕಾ ಹೋಮ’ವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶಾಪ ವಿಮೋಚನೆಗಾಗಿ ಮತ್ತಷ್ಟು ವರ್ಷಗಳ ಕಾಲ ಈ ಧಾರ್ಮಿಕ ಕಾರ್ಯಗಳು ನಡೆಯಬೇಕಾಗಿದೆಯೆಂದು ಹೇಳಿದರು.

ಸಮುದಾಯ ಭವನ: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್’ನಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ 47 ಸೆಂಟ್ ಜಾಗವನ್ನು ಖರೀದಿಸಲಾಗಿದೆ. ಈ ಜಾಗದಲ್ಲಿ ಸಮುದಾಯ ಭವನ ನಿರ್ಮಾಣದ ಚಿಂತನೆ ಇದ್ದು, ಈಗಾಗಲೆ ಉದ್ದೇಶಿತ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಸಂಪರ್ಕಿಸಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಯಾಗಿರುವ 10 ಕೋಟಿ ಅನುದಾನದಲ್ಲಿ 1 ಕೋಟಿ ರೂ. ನಮ್ಮ ಉದ್ದೇಶಿತ ಯೋಜನೆಗೆ ದೊರಕುವ ಆಶಯವನ್ನು ಎಂ.ಬಿ. ದೇವಯ್ಯ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!