ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 (Chandrayaan-3), ಆದಿತ್ಯ ಎಲ್1 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ)ಮತ್ತೊಂದು ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಖಗೋಳಶಾಸ್ತ್ರದಲ್ಲಿ ಅತ್ಯಾಧುನಿಕ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ಗುರಿಯನ್ನು ಇಸ್ರೋ ಹೊಂದಿದ್ದು, ಹೀಗಾಗಿ XPoSAT (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ) ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧವಾಗಿದೆ.
XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಭಾರತದ ಮೊದಲ ಮೀಸಲಾದ ಪೋಲಾರಿಮೆಟ್ರಿ ಮಿಷನ್. ಇದು ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ.
ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಪರಿಭ್ರಮಿಸಲಿರುವ ಈ ಉಪಗ್ರಹವು ಎರಡು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿರಲಿದೆ ಎಂದು ಇಸ್ರೊ ವಿವರಿಸಿದೆ.
ಪಾಲಿಕ್ಸ್ (ಪೊಲ್ಯಾರಿಮೀಟರ್ ಇನ್‌ಸ್ಟ್ರುಮೆಂಟ್ ಇನ್ ಎಕ್ಸ್ ರೇ) ಧ್ರುವಗಳ ಕೋನದ ಮಾನದಂಡಗಳ ಅಧ್ಯಯನ ಮಾಡಿದರೆ, ಎಕ್ಸ್‌ಪೆಕ್ಟ್ (ಎಕ್ಸ್ ರೇ ಸ್ಪೆಕ್ಟ್ರೊಸ್ಕೋಪಿ) ಉಪಕರಣ ಶಕ್ತಿಯ ವ್ಯಾಪ್ತಿಯನ್ನು ಅಂದಾಜಿಸಿ ಮಾಹಿತಿಯನ್ನು ರವಾನಿಸಲಿದೆ ಎಂದು ಇಸ್ರೊ ತಿಳಿಸಿದೆ.
ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯ, ಪಲ್ಸರ್ ವಿಂಡ್ ನೀಹಾರಿಕೆಗಳಂತಹ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಎಕ್ಸ್-ರೇ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ ಎಂದು ಇಸ್ರೋ ಹೇಳಿದೆ.
ಎಕ್ಸ್‌ಪೊಸ್ಯಾಟ್ ಉಡಾವಣೆಗೆ ಸಿದ್ಧವಾಗಿದೆ ಎಂದು ಇಸ್ರೊ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು. ಆದರೆ, ಉಡಾವಣೆಯ ಸಮಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.