ಚಂದ್ರಯಾನ-4 ಲ್ಯಾಂಡಿಂಗ್‌ ಸೈಟ್‌ ಘೋಷಿಸಿದ ಇಸ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಂದ್ರಯಾನ-3ಯ ಯಶಸ್ಸು ಬಳಿಕ ಚಂದ್ರಯಾನ ಯೋಜನೆಯ ಮುಂದಿನ ಭಾಗವಾಗಿರುವ ಚಂದ್ರಯಾನ-4ನಲ್ಲಿ ಲ್ಯಾಂಡರ್‌ ಚಂದ್ರನ ಯಾವ ಭಾಗದಲ್ಲಿ ಲ್ಯಾಂಡ್‌ ಆಗಲಿದೆ ಎನ್ನುವ ಮಾಹಿತಿಯನ್ನು ಸ್ಯಾಕ್‌ ಅಂದರೆ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನ ನಿರ್ದೇಶಕ ನಿಲೇಶ್‌ ದೇಸಾಯಿ ಘೋಷಣೆ ಮಾಡಿದ್ದಾರೆ.

ಭಾರತದ ಬಹುನಿರೀಕ್ಷಿತ ಚಂದ್ರಯಾನ-4 ಯೋಜನೆಯು ಚಂದ್ರನ ಕಲ್ಲುಗಳು ಹಾಗೂ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ. ಈ ನೌಕೆಯು ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ ಇಳಿದ ಶಿವಶಕ್ತಿ ಪಾಯಿಂಟ್‌ನ ಅತ್ಯಂತ ಸನಿಹದಲ್ಲಿಯೇ ಇಳಿಯಲಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭವಿಷ್ಯದ ಚಂದ್ರನ ಪರಿಶೋಧನಾ ಯೋಜನೆಗಳ ಕುರಿತು ದೇಸಾಯಿ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ .

ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್‌ ಇಳಿದ ಸ್ಥಳವಾಗಿರುವ ಶಿವಶಕ್ತಿ ಪಾಯಿಂಟ್‌. ಚಂದ್ರನ ದಕ್ಷಿಣ ಧ್ರುವದ ಸಮೀಪ ಜಲಜನಕದ ಮಂಜುಗಡ್ಡೆಯನ್ನು ಆಶ್ರಯಿಸಿರುವ ಪ್ರದೇಶವಾಗಿದೆ. ಅದಲ್ಲದೆ, ಈ ಪ್ರದೇಶದಲ್ಲಿ ಶಾಶ್ವತವಾಗಿ ನೆರಳಿನ ಉಪಸ್ಥಿತಿ ಇರುವ ಕಾರಣ ಗಮನಾರ್ಹ ವೈಜ್ಞಾನಿಕ ಆಸಕ್ತಿಯ ತಾಣವಾಗಿದೆ.ಈ ಪ್ರದೇಶದ ಬಳಿ ಲ್ಯಾಂಡ್‌ ಮಾಡುವ ಮೂಲಕ, ಚಂದ್ರಯಾನ-4 ಈ ವೈಜ್ಞಾನಿಕವಾಗಿ ಮೌಲ್ಯಯುತವಾದ ಪ್ರದೇಶಗಳಿಂದ ಮಾದರಿಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ಭೂಮಿಗೆ ವಾಪಾಸ್‌ ತರುವ ಅವಕಾಶವನ್ನು ಹೊಂದಿರುತ್ತದೆ. ಮಿಷನ್ ಒಂದು ಚಂದ್ರನ ದಿನದ ಕಾರ್ಯಾಚರಣೆಯ ಜೀವನವನ್ನು ಹೊಂದಿರುತ್ತದೆ, ಇದು ಸರಿಸುಮಾರು 14 ಭೂಮಿಯ ದಿನಗಳು ಎಂದು ದೇಸಾಯಿ ಹೇಳಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿರುವ ಕಠಿಣ ಪರಿಸ್ಥಿತಿಗಳ ಕಾರಣದಿಂದಾಗಿ ಈ ಸೀಮಿತ ಅವಧಿಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಚಂದ್ರನ ರಾತ್ರಿಯಲ್ಲಿ ತೀವ್ರತರವಾದ ತಾಪಮಾನದ ವ್ಯತ್ಯಾಸಗಳು ಉಂಟಾಗುತ್ತದೆ. ಸೂರ್ಯ ಬೆಳಕಿನ ಕೊರತೆಯಿಂದಾಗಿ ದೀರ್ಘಾವಧಿ ಕಾರ್ಯಾಚರಣೆಗಳಿಗೆ ಗಮನಾರ್ಹ ಸವಾಲುಗಳು ಎದುರಾಗುತ್ತದೆ.ಚಂದ್ರಯಾನ-4 ಭಾರತದ ಈವರೆಗಿನ ಅತ್ಯಂತ ಸಂಕೀರ್ಣ ಮಿಷನ್‌ ಆಗಿದ್ದು, ಇದೊಂದೇ ಯೋಜನೆಯಲ್ಲಿ ಬಹು ಉಡಾವಣೆಗಳು ಮತ್ತು ಬಾಹ್ಯಾಕಾಶ ನೌಕೆ ಮಾಡ್ಯುಲ್‌ಗಳನ್ನು ಒಳಗೊಂಡಿದೆ. ವಿಭಿನ್ನ ಪೇಲೋಡ್‌ಗಳನ್ನು ಸಾಗಿಸಲು ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿದೆ. ಈ ವಿಧಾನವು ಇಸ್ರೋಗೆ ಮೊದಲನೆಯದಾಗಿದ್ದು ಮತ್ತು ಮಿಷನ್‌ನ ಮಹತ್ವಾಕಾಂಕ್ಷೆಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ.

ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ವಿವರವಾದ ವೈಜ್ಞಾನಿಕ ವಿಶ್ಲೇಷಣೆಗಾಗಿ ಭೂಮಿಗೆ ತರುವುದು ಮಿಷನ್‌ನ ಪ್ರಾಥಮಿಕ ಉದ್ದೇಶವಾಗಿದೆ. ಯಶಸ್ವಿಯಾದರೆ, ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳಲಿದೆ.

ಚಂದ್ರಯಾನ-4 ಐದು ಬಾಹ್ಯಾಕಾಶ ನೌಕೆ ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತದೆ: ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡಿಂಗ್‌ಗಾಗಿ ಡಿಸೆಂಡರ್ ಮಾಡ್ಯೂಲ್, ಚಂದ್ರನ ಮೇಲ್ಮೈಯಿಂದ ಏರುವ ಅಸೆಂಡರ್‌ ಮಾಡ್ಯೂಲ್, ರಿಟರ್ನ್ ಜರ್ನಿಯನ್ನು ನ್ಯಾವಿಗೇಟ್ ಮಾಡಲು ಟ್ರಾನ್ಸ್‌ಫರ್‌ ಮಾಡ್ಯೂಲ್ ಮತ್ತು ಭೂಮಿಗೆ ಚಂದ್ರನ ಮಾದರಿಗಳೊಂದಿಗೆ ಸುರಕ್ಷಿತವಾಗಿ ಬರಲು ಮರು-ಪ್ರವೇಶ ಮಾಡ್ಯೂಲ್ ಒಳಗೊಂಡಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!