Monday, December 15, 2025

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬದಲಾವಣೆ?: ರೇಸ್ ನಲ್ಲಿದೆ ಪ್ರಿಯಾಂಕಾ ಗಾಂಧಿ ಹೆಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿಲ್ಲಿಯಲ್ಲಿ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಕುರಿತ ಚರ್ಚೆಗಳು ಮತ್ತೊಮ್ಮೆ ವೇಗ ಪಡೆದಿವೆ. ಪಕ್ಷದ ಪ್ರಸ್ತುತ ಸ್ಥಿತಿ ಹಾಗೂ ನಿರಂತರ ಚುನಾವಣಾ ಸೋಲಿನ ಹಿನ್ನೆಲೆ, ಹೊಸ ನೇತೃತ್ವದ ಅಗತ್ಯವಿದೆ ಎಂಬ ಮಾತು ಸಂಘಟನೆಯ ಒಳವಲಯದಲ್ಲೇ ಎದ್ದಿದೆ.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಮೊಹಮ್ಮದ್ ಮೊಖಿಮ್ ಬರೆದ ಪತ್ರ ರಾಷ್ಟ್ರಮಟ್ಟದಲ್ಲಿ ರಾಜಕೀಯ ಗಮನ ಸೆಳೆದಿದ್ದು, ಅವರು ಸೋನಿಯಾ ಗಾಂಧಿಗೆ ಬರೆಯುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಬದಲಿಗೆ ಪ್ರಿಯಾಂಕಾ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.

ಒಡಿಶಾದಲ್ಲಿ ಪಕ್ಷ ದುರ್ಬಲವಾಗುತ್ತಿರುವುದು ಖರ್ಗೆ ಹಾಗೂ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಪರಿಣಾಮಕಾರಿತ್ವ ಕಾಣುತ್ತಿಲ್ಲವೆಂಬ ಆರೋಪ ಮೊಖಿಮ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಅಭಿಪ್ರಾಯಕ್ಕೆ ಕೆಲ ನಾಯಕರು ಬೆಂಬಲ ಸೂಚಿಸಿದರೂ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಜಯದೇವ್ ಜೆನಾ ಪತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಜವಾಬ್ದಾರಿಯಿಲ್ಲದ ಟೀಕೆಗಳ ಮೂಲಕ ಗೊಂದಲ ಸೃಷ್ಟಿಯಾಗಬಾರದು ಎಂದು ಜೆನಾ ಚಾಟಿ ಬೀಸಿದ್ದಾರೆ.

ಮತ್ತೊಂದೆಡೆ, ರಾಹುಲ್ ಗಾಂಧಿ ಕುರಿತು ಮೊಖಿಮ್ ಮಾಡಿರುವ ಆರೋಪ ಪಕ್ಷದ ಒಳಗೇ ಬೆಂಕಿ ಹಚ್ಚಿದೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿದ್ದಾರೆ ಎಂದು ಹಲವರು ಮೊಖಿಮ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅವರಿಂದ ಕ್ಷಮೆ ಕೇಳುವಂತೆ ಬೇಡಿಕೆಯೂ ಹೆಚ್ಚಾಗಿದೆ.

ಒಟ್ಟಾರೆ, ಪಕ್ಷದ ಒಳರಾಜಕೀಯದಲ್ಲಿ ನಾಯಕತ್ವ ಪುನರ್ ವಿಮರ್ಶೆ ಅವಶ್ಯಕತೆಯ ಚರ್ಚೆಯೇ ಇದೀಗ ಮುಖ್ಯ ವಿಚಾರವಾಗಿದೆ.

error: Content is protected !!