ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಬರೀ ಗ್ಯಾಸ್, ಪೆಟ್ರೋಲ್ ಮೇಲೆ ಮಾತ್ರ ಆಗಿಲ್ಲ. ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಚನ್ನಪಟ್ಟಣದ ಬೊಂಬೆಗಳು ತಯಾರಾಗಿದ್ದು, ಇನ್ನೇನು ರಫ್ತಾಗಬೇಕು ಎನ್ನುವಾಗ ಸಮಸ್ಯೆ ಎದುರಿಸಿದೆ. ಬೇರೆ ಬೇರೆದೇಶಗಳಲ್ಲಿ ರಾರಾಜಿಸಬೇಕಿದ್ದ ಬೊಂಬೆಗಳು ಕಾರ್ಖಾನೆಯಲ್ಲಿ ಧೂಳು ಹಿಡಿಯುತ್ತಿವೆ.
ಅಮೆರಿಕಾ ಸೇರಿ ಹಲವು ಗಲ್ಪ್ ದೇಶಗಳಿಗೆ ಹಡಗುಗಳ ಮೂಲಕ ರಫ್ತಾಗ್ತಿದ್ದ ಬೊಂಬೆಗಳು ಹಾಗೂ ಮರದ ಆಟಿಕೆಗಳು ಕಾರ್ಖಾನೆಯಲ್ಲೇ ಉಳಿಯುವಂತಾಗಿದೆ.ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಶೇ.30ರಷ್ಟು ಮರದ ಗೊಂಬೆಗಳು, ಆಟಿಕೆಗಳು ಹಾಗೂ ಇನ್ನಿತರ ಅಲಂಕಾರಿಕ ಕಲಾಕೃತಿಗಳು ವಿದೇಶಕ್ಕೆ ರಫ್ತಾಗುತ್ತವೆ. ಚನ್ನಪಟ್ಟಣದ ಬೊಂಬೆಗಳಿಗೆ ವಿದೇಶದಲ್ಲಿ ಬಾರಿ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ತಯಾರಿಕಾ ಕಾರ್ಯ ನಡೆಯುತ್ತದೆ. ಆದರೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರೋ ಇಸ್ರೇಲ್-ಇರಾನ್ ಯುದ್ಧದಿಂದ ಬೊಂಬೆ ಆರ್ಡರ್‌ಗಳ ಸಂಖ್ಯೆ ಇಳಿಕೆಯಾಗಿದೆ.
ಈ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚು ಆರ್ಡರ್‌ಗಳು ಬರುತ್ತಿದ್ದವು. ಆದರೆ ಈವರೆಗೂ ಒಂದು ಆರ್ಡರ್ ಕೂಡ ಬಂದಿಲ್ಲ. ದಸರಾ, ಈಸ್ಟರ್ ಹಾಗೂ ಕ್ರಿಸ್‌ಮಸ್‌ಗೆ ಕೂಡ ಆರ್ಡರ್ಸ್ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ಎದುರಾಗಿದೆ. ಈಗಾಗಲೇ ಆರ್ಡರ್ ಮಾಡಿರುವ ಗ್ರಾಹಕರು ತಮ್ಮ ಆರ್ಡರ್ ಹೋಲ್ಡ್ ಮಾಡುವಂತೆ ತಿಳಿಸಿದ್ದಾರೆ. ಆರ್ಡರ್ ಹೋಲ್ಡ್ ಆದ್ರೆ ನಾವು ಪ್ರೊಡಕ್ಷನ್ ಕೂಡಾ ನಿಲ್ಲಿಸಬೇಕಾಗುತ್ತೆ. ಅಲ್ಲದೇ ಹಡಗುಗಳ ಮೂಲಕ ನಮ್ಮ ವಸ್ತುಗಳು ರಫ್ತಾಗೋದ್ರಿಂದ ಸಮುದ್ರದಲ್ಲಿ ಸಿಲುಕುವ ಆತಂಕ ಕೂಡಾ ಇದೆ. ಹಾಗಾಗಿ ತಾತ್ಕಾಲಿಕವಾಗಿ ರಫ್ತು ನಿಲ್ಲಿಸಿದ್ದೇವೆ ಎಂದು ಗೊಂಬೆ ಉದ್ಯಮಿ ತಿಳಿಸಿದ್ದಾರೆ.



