ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ಸೇರ್ಪಡೆ ವಿಚಾರ ಈಗ ಅದು ಮುಗಿದ ಅಧ್ಯಾಯ. ಕಾಂಗ್ರೆಸ್ ಗೆ ಸೇರುವ ವಿಷಯ ನನ್ನ ತಲೆಯಲ್ಲೇ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಕೊಳ್ಳೇಗಾಲದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಾನೊಬ್ಬ ನೇರ ರಾಜಕಾರಣಿ. ಏನೇ ಇದ್ದರೂ ನೇರವಾಗಿ ಹೇಳುತ್ತೇನೆ. ಕ್ಷುಲ್ಲಕ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.
‘ಎರಡು ತಿಂಗಳಿಂದ ನನ್ನನ್ನು ಮಾಧ್ಯಮದವರು ಉಜ್ಜುತ್ತಾ ಇದ್ದೀರಿ. ಎಷ್ಟು ಬೇಕೋ ಅಷ್ಟು ಉಜ್ಜಿಕೊಳ್ಳಿ’ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ‘ಜಿಲ್ಲೆಯಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಚಾಮರಾಜನಗರ ನನ್ನ ಪ್ರೀತಿಯ ಜಿಲ್ಲೆ ಹೌದು. ಆದರೆ ಇಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಿಲ್ಲ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.