ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತ ಚಿತ್ರಮಂದಿರಗಳಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿಯನದ ‘777 ಚಾರ್ಲಿ’ ಎಲ್ಲರ ಮನಸೆಳೆಯುತ್ತಿದ್ದರೆ, ಇತ್ತ ಮಂಗಳೂರಿನ ‘ಚಾರ್ಲಿ’ ತನ್ನ ತುಂಟಾಟಗಳಿಂದ ಗಮನಸೆಳೆಯುತ್ತಿದ್ದಾಳೆ. ಈ ಪುಟಾಣಿ ’ಚಾರ್ಲಿ’ಯ ತುಂಟಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
‘777 ಚಾರ್ಲಿ’ ಸಿನೆಮಾ ಸ್ಫೂರ್ತಿ
ಪೊಲೀಸ್ ಇಲಾಖೆ ಮಂಗಳೂರಿನ ಶ್ವಾನ ದಳಕ್ಕೆ ಇತ್ತೀಚೆಗೆ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿ ಮರಿಯನ್ನು ಸೇರ್ಪಡೆ ಗೊಳಿಸಿತ್ತಲ್ಲದೆ, ‘777 ಚಾರ್ಲಿ’ ಸಿನಿಮಾದಿಂದ ಸ್ಪೂರ್ತಿ ಪಡೆದು ಮಂಗಳೂರು ನಗರ ಪೊಲೀಸ್ ಆಯಕ್ತ ಎನ್. ಶಶಿಕುಮಾರ್ ಅವರು ಈ ಶ್ವಾನದ ಮರಿಗೆ ‘ಚಾರ್ಲಿ’ ಎಂದು ನಾಮಕರಣ ಕೂಡಾ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆ ಸುದ್ದಿಗೂ ಗ್ರಾಸವಾಗಿತ್ತು.
ಬೆಂಗಳೂರಿಗೆ ಹೊರಟಿದ್ದಾಳೆ!
ತನ್ನ ತುಂಟಾಟಗಳಿಂದ ಎಲ್ಲರ ಮನಸೆಳೆಯು ತ್ತಿರುವ ಈ ಮರಿ ಚಾರ್ಲಿ ತರಬೇತಿಗಾಗಿ ಬೆಂಗಳೂರು ನಗರಕ್ಕೆ ಹೊರಟುನಿಂತಿದ್ದಾಳೆ. ಬೆಂಗಳೂರು ಸೌತ್ ಸಿಆರ್‌ನಲ್ಲಿ ಆರು ತಿಂಗಳ ಕಾಲ ಈಕೆಗೆ ತರಬೇತಿ ನೀಡಲಾಗುತ್ತದೆ. ಬಳಿಕ ಬಾಂಬ್ ಪತ್ತೆ ಮಾಡಲು ಮಂಗಳೂರು ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಈಕೆ ಮತ್ತೆ ಸೇರ್ಪಡೆಗೊಳ್ಳಲಿದ್ದಾಳೆ.
ಆರು ತಿಂಗಳು ಬಿಟ್ಟು ಬರ್ತಾಳೆ
ಮಂಗಳೂರು ಶ್ವಾನದಳದಲ್ಲಿ ಸಧ್ಯ ಐದಕ್ಕೂ ಹೆಚ್ಚು ಶ್ವಾನಗಳಿವೆ. ಮೂರು ತಿಂಗಳ ಹಿಂದೆ ಹುಟ್ಟಿದ ಈ ಹೆಣ್ಣು ಶ್ವಾನವನ್ನು ಈಗ ಇಲಾಖೆಗೆ ಸೇರಿಸಿದ್ದು, ಉತ್ತಮ ಸೇವೆ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಯಾರು ಈ ಪುಟಾಣಿ?
ಮಂಗಳೂರು ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಿರುವ ಬಂಟ್ವಾಳ ಮೂಲದ ಈ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ಶ್ವಾನ, 2022 ಮಾ. 16ರಂದು ಜನಿಸಿತ್ತು.