ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಮುಂಬೈನ ಸೆಷನ್ಸ್ ನ್ಯಾಯಾಲಯ ಗುರುವಾರ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 21 ರಂದು, ಅಂಧೇರಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್(ಪ್ರಥಮ ದರ್ಜೆ) ವೈ ಪಿ ಪೂಜಾರಿ ಅವರು, ರಾಮ್ ಗೋಪಾಲ್ ವರ್ಮಾ ದೋಷಿ ಎಂದು ಘೋಷಿಸಿದ್ದರು. ಅಲ್ಲದೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸಹ ವಿಧಿಸಿದ್ದರು.
ಆದ್ರೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ರಾಮ್ ಗೋಪಾಲ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ ಎ ಕುಲಕರ್ಣಿ ಅವರು ವಜಾಗೊಳಿಸಿದ್ದು, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ನಿರ್ದೇಶಕರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದಾರೆ.ಪ್ರಕರಣದ ವಿಚಾರಣೆಯನ್ನು ಜುಲೈ 28 ಕ್ಕೆ ಮುಂದೂಡಲಾಗಿದೆ.
ದೂರುದಾರರಿಗೆ ರಾಮ್ ಗೋಪಾಲ್ ವರ್ಮಾ ಅವರು 3.75 ಲಕ್ಷ ರೂ. ಪರಿಹಾರ ನೀಡಬೇಕು. ಮೂರು ತಿಂಗಳೊಳಗೆ ಈ ಮೊತ್ತವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.