ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಿ ಹತ್ತು ದಿನಗಳೂ ಆಗಿಲ್ಲ.. ಇನ್ನೂ ಮದುವೆ ಸಮಾರಂಭ ಮುಗಿದಿಲ್ಲ.. ಅಷ್ಟರಲ್ಲಿ ನವದಂಪತಿ ಇಹಲೋಕ ತ್ಯಜಿಸಿದ್ದಾರೆ. ಇಬ್ಬರೂ ಜೂನ್ 1 ರಂದು ವಿವಾಹವಾಗಿ ಹನಿಮೂನ್‌ಗೆಂದು ಬಾಲಿಗೆ ಹೋಗಿದ್ದರು. ತಮ್ಮ ವೈಕಕ್ತಿಕ ಜೀವನ ಎಂಜಾಯ್ ಮಾಡುತ್ತಾ ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್‌ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಸಮುದ್ರಕ್ಕೆ ಇಳಿದಿದ್ದಾರೆ. ಬಹುಶಃ ಇದು ತಮ್ಮ ಕೊನೆಯ ಸವಾರಿ ಎಂದು ಅವರು ಊಹಿಸಿರಲಿಲ್ಲ ಅನಿಸುತ್ತೆ.
ಮೃತ ವೈದ್ಯ ದಂಪತಿಯನ್ನು ಲೋಕೇಶ್ವರನ್ ಮತ್ತು ವಿಭೂಷಣಾ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಜೂನ್ 1ರಂದು ಪೂನಮಲ್ಲಿಯ ಕಲ್ಯಾಣಮಂಟಪದಲ್ಲಿ ಇಬ್ಬರೂ ವಿವಾಹವಾಗಿದ್ದರು. ಫೋಟೋ ಶೂಟ್ ಮಾಡುವಾಗ ದಂಪತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಇಬ್ಬರ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ. ಮನೆಯಲ್ಲಿ ಅವರ ಸಾವಿನ ಸುದ್ದಿ ಬಂದಾಗ ಮದುವೆಯ ಸುಖ ಕ್ಷಣಗಳಲ್ಲಿ ದುಃಖವಾಗಿ ಮಾರ್ಪಟ್ಟಿತು. ಅವರಿಬ್ಬರ ಕುಟುಂಬದ ಸದಸ್ಯರು ತರಾತುರಿಯಲ್ಲಿ ಬಾಲಿ ತಲುಪಿದ್ದಾರೆ. ಶುಕ್ರವಾರ ಲೋಕೇಶ್ವರನ್ ಅವರ ಮೃತದೇಹ ಮತ್ತು ಶನಿವಾರ ಬೆಳಗ್ಗೆ ವಿಭೂಷಣಾ ಅವರ ಮೃತದೇಹ ಪತ್ತೆಯಾಗಿದೆ.
ಪಲ್ಟಿಯಾದ ಸ್ಪೀಡ್ ಬೋಟ್
ಸ್ಪೀಡ್ ಬೋಟ್ ಪಲ್ಟಿಯಾದದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಮೃತದೇಹಗಳನ್ನು ಚೆನ್ನೈಗೆ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬೆಂಬಲ ನೀಡುವಂತೆ ಮನವಿ ಮಾಡಿದರು. ಇಂಡೋನೇಷ್ಯಾದಿಂದ ಚೆನ್ನೈಗೆ ನೇರ ವಿಮಾನ ಇಲ್ಲದ ಕಾರಣ ಇಬ್ಬರ ಮೃತದೇಹಗಳನ್ನು ಮೊದಲು ಮಲೇಷ್ಯಾಕ್ಕೆ ಕಳುಹಿಸಲಾಗಿತ್ತು ಅಲ್ಲಿಂದ ಸ್ಥಳಾಂತರಿಸಿ ಭಾರತಕ್ಕೆ ಕರೆತರಲಾಗುವುದು. ಮದುವೆ ನಡೆದ ಒಂದು ವಾರದೊಳಗೆ ಇಂತಹದ್ದೊಂದು ದುರ್ಘಟನೆ ಎರಡೂ ಕುಟುಂಬಕ್ಕೂ ಬರ ಸಿಡಿಲು ಬಡಿದಂತಾಗಿದೆ.