ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿಲ್ಲ. ಯಾವುದೇ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ ಎಂದಿದ್ದಾರೆ. ನಾವೇನೂ ಗ್ಯಾರಂಟಿ ವಿರೋಧಿಗಳು ಅಲ್ಲ. ಖಜಾನೆಯಲ್ಲಿರುವ ಹಣ ಗಮನಿಸದೆ ಜನರಿಗೆ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳುವುದು ಹೇಗೆ? ನಿಜವಾಗಿ ನಾವು ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ವಿವೇಚಿಸಬೇಕಾಗಿತ್ತು; ಮತ್ತು ಆ ನಿಟ್ಟಿನಲ್ಲಿ ಪರಿಜ್ಞಾನ ಇರಬೇಕಿತ್ತು ಎಂದು ತಿಳಿಸಿದ್ದಾಗಿ ವಿವರಿಸಿದರು.
ಸಂಪೂರ್ಣವಾಗಿ ಇಡೀ ಸರಕಾರವು ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ಹೋಗಿದೆ. ಭ್ರಷ್ಟಾಚಾರದ ಕಾರಣದಿಂದ ರಾಜ್ಯ ದಿವಾಳಿ ಆಗಿದೆ. ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇವೆಲ್ಲವನ್ನೂ ಸರಕಾರ ಗಮನಿಸುತ್ತಿಲ್ಲ ಎಂಬುದನ್ನು ಎಚ್ಚರಿಕೆಯ ರೂಪದಲ್ಲಿ ಪ್ರಧಾನಿಯವರು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಅದನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡು ಪುರಾವೆ ಕೇಳುತ್ತಿದ್ದಾರೆ. ಏನು ಪುರಾವೆ ಬೇಕಿತ್ತು ನಿಮಗೆ ಎಂದು ಪ್ರಶ್ನಿಸಿದರು.
5 ಗ್ಯಾರಂಟಿ ಕೊಟ್ಟಿದ್ದೀರಲ್ಲ? ಯಾವ ಗ್ಯಾರಂಟಿ ಸರಿಯಾಗಿ ಜನರಿಗೆ ತಲುಪಿದೆ ಹೇಳಿ? ಎಂದು ಕೇಳಿದರು. ಸಿಎಂ ಪ್ರತಿದಿನ ಸುಳ್ಳು ಹೇಳುತ್ತಾರೆ. ನಿಮ್ಮ ಡಿಸಿಎಂ ಡಿ.ಕೆ.ಶಿವಕುಮಾರರನ್ನು ನಂಬುತ್ತೀರಾ? ಸಿಎಂ ರವರು ಶಿವಕುಮಾರರಿಗೆ ಗೌರವ ಕೊಡುತ್ತೀರಾ? ಎಂದು ಕೇಳಿದರು.
ಬಿಜೆಪಿಯವರಿಗೆ ಸುಳ್ಳು ಹೇಳಲು ಬರುವುದಿಲ್ಲ ಎಂದು ಶಿವಕುಮಾರರು ಹೇಳಿದ್ದಾರೆ. ನಾವಾದರೆ ಶೇ 40 ಕಮಿಷನ್ ಬಗ್ಗೆ ಜನರಿಗೆ ತಿಳಿಸಿ, 135 ಸೀಟು ಗೆದ್ದಿದ್ದಾಗಿ ತಿಳಿಸಿದ್ದಾರೆ. ಅವರ ಸರ್ಟಿಫಿಕೇಟ್ ಇದೆ. ಸಿಎಂ ಯಾಕೆ ತಪ್ಪು ಮಾಹಿತಿ ಕೊಡುತ್ತಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯ ಪ್ರತಿದಿನ ಸುಳ್ಳು ಹೇಳಿ ಸುಳ್ಳುರಾಮಯ್ಯ ಆಗಿದ್ದಾರೆ. ಬರ ಪರಿಸ್ಥಿತಿಗೆ ಮೊನ್ನೆ 5 ಸಾವಿರ ಕೋಟಿ ಬಿಡುಗಡೆ ಮಾಡಿದ ಹೇಳಿಕೆ ಕೊಟ್ಟಿದ್ದರು. ವಾಸ್ತವವಾಗಿ ಬಿಡುಗಡೆ ಆದುದು 124 ಕೋಟಿ ಎಂದು ಟೀಕಿಸಿದರು.
ಬರದ ವಿಚಾರದಲ್ಲಿ ಸಿದ್ದರಾಮಯ್ಯನವರು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಆಡಳಿತ ಎಲ್ಲಿ ಹೋಗಿದೆ? ನಿಮ್ಮ ಆಡಳಿತದ ಅರಿವು ಜನರಿಗೆ ಆಗಿದೆ ಎಂದು ತಿಳಿಸಿದರು. ಪಂಚರಾಜ್ಯ ಚುನಾವಣೆಗೆ ಇಲ್ಲಿಂದ ದುಡ್ಡು ಕಳಿಸುತ್ತಿದ್ದೀರಿ. ಬರ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಲು ನಿಮ್ಮ ಸಚಿವರೇ ಬರುತ್ತಿಲ್ಲ ಎಂದು ಆಕ್ಷೇಪಿಸಿದರು.
ಜಿಲ್ಲಾಧಿಕಾರಿಗಳ ಬಳಿ ಹಣ ಇದ್ದರೂ ಅದನ್ನು ಬಿಡುಗಡೆ ಮಾಡುತ್ತಿಲ್ಲ. ಇಂಥ ದುಸ್ಥಿತಿ ಇದ್ದರೂ ಮೀನಮೇಷ ಎಣಿಸುತ್ತಿದ್ದೀರಲ್ಲವೇ ಎಂದು ಟೀಕಿಸಿದರು. ನಿಮ್ಮ ಕೆಲಸ ಮಾಡದೆ ಕೇವಲ ಕೇಂದ್ರದ ಕಡೆ ಬೆರಳು ತೋರಿಸುತ್ತಿದ್ದೀರಿ ಎಂದು ನುಡಿದರು.
5 ಗಂಟೆ ರೈತರಿಗೆ ಕರೆಂಟ್ ಸರಬರಾಜು ಎಂದರೂ 2 ಗಂಟೆ ಕೊಡಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಅಸಮರ್ಪಕ ಸರಬರಾಜಿನಿಂದ ಟಿ.ಸಿ.ಗಳು ಸುಟ್ಟು ಹೋಗುತ್ತಿವೆ. ರೈತರಿಗೆ ಕೆಟ್ಟ ಪರಿಸ್ಥಿತಿ ಇದೆ. ದರಿದ್ರವನ್ನೇ ಹೊತ್ತು ಬಂದಿದ್ದಾರೆ. ಇನ್ನೈದು ವರ್ಷ ಕಾಂಗ್ರೆಸ್ ಆಡಳಿತ ಮಾಡಿದರೆ ಆ ದರಿದ್ರವು ರಾಜ್ಯವನ್ನೇ ನಿರ್ನಾಮ ಮಾಡಲಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ಕಲೆಕ್ಷನ್ ಮಾಡುವ ಡಿ.ಕೆ.ಶಿವಕುಮಾರ್ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ತನಿಖೆ ಮಾಡಿದ್ದೀರಾ? 102 ಕೋಟಿ ಬಗ್ಗೆ ಉತ್ತರ ನೀಡಿದ್ದೀರಾ? ಅದು ನಿಮ್ಮ ಹಣವಾದ ಕಾರಣ ಉತ್ತರ ಕೊಡುತ್ತಿಲ್ಲ ಎಂದು ಜನರು ಭಾವಿಸಿದ್ದಾರೆ ಎಂದು ತಿಳಿಸಿದರು. ಎಲ್ಲವನ್ನೂ ಮುಚ್ಚಿಡಲು ನೋಡುತ್ತಿದ್ದಾರೆ. ಶೇ 60 ಕಮಿಷನ್ ಕುರಿತು ಉತ್ತರಿಸಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯರಿಗೆ ಭಯ ಬಂದು 5 ವರ್ಷ ನಾನೇ ಸಿಎಂ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರಕಾರ ತುಂಬ ಅಭದ್ರವಾಗಿದೆ. ಅವರಿಗೆ ಅಭದ್ರತೆ ಕಾಡುತ್ತಿರುವ ಕಾರಣ ನೀವು ವಿಚಲಿತರಾಗಿ ಮಾತನಾಡಿದ್ದೀರಿ ಎಂದು ತಿಳಿಸಿದರು. ಪ್ರಧಾನಿಯವರನ್ನು ಗೌರವಸ್ಥಾನದಿಂದ ನೋಡಿ ಎಂದು ಒತ್ತಾಯಿಸಿದರಲ್ಲದೆ, ಏಕವಚನದಿಂದ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.