ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸ್ವ ಪಕ್ಷದವರೇ ಇದೀಗ ಸಿಡಿದೆದ್ದಿದ್ದು, ನನಗೆ ಸಿಎಂ ಮಾಡುವುದು ನನಗೆ ಗೊತ್ತಿದೆ. ಅವರನ್ನು ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗುಡುಗಿದ್ದಾರೆ.
ಸಂಪುಟದಲ್ಲಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು.ಆದ್ರೆ ಕೊನೆ ಕ್ಷಣದಲ್ಲಿ ಬಿ ಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಬಿ ಕೆ ಹರಿಪ್ರಸಾದ್ ಮನಸ್ಸಿನ ಮಾತುಗಳನ್ನಾಡಿದ್ದು, ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಮ್ಮನ್ನು ಬಹಳ ವ್ಯವಸ್ಥಿತವಾಗಿ ತುಳಿಯುತ್ತಾರೆ. ನಾನು ಮಂತ್ರಿ ಆಗೋದು ಬಿಡುವುದು ಬೇರೆ ಪ್ರಶ್ನೆ. ಆದರೆ ದೇಶದ ಬೇರೆ ರಾಜ್ಯಗಳಲ್ಲಿನ ಐವರು ಮುಖ್ಯಮಂತ್ರಿ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷಗಳ ಕಾಲ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಮ್ಮನ್ನು ಓಡಿಸಿ ಬಿಡುತ್ತಿದ್ದರು. ಛತ್ತೀಸ್ಗಡ ಮುಖ್ಯಮಂತ್ರಿ ನಮ್ಮ ನೆಂಟರು ಅಲ್ಲ, ಹಾಗಿದ್ದರೂ ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ನನಗೆ ಮುಖ್ಯಮಂತ್ರಿ ಮಾಡೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸೋದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೆವು.ಕರ್ನಾಟಕದಲ್ಲಿ ರಾಜಕೀಯವಾಗಿ ಈಡಿಗ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದ್ರು ಆಗುತ್ತಿಲ್ಲ. ಅವಕಾಶ ವಂಚಿರಾಗುತ್ತಿರುವುದು ನೋಡಿದರೆ ಯಾರದ್ದೊ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನ್ನಿಸುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಹಾಗೂ ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕೆಂದು ಯೋಚಿಸುತ್ತೇವೆ. ಸ್ವಾರ್ಥಕ್ಕೆ ಯಾವುದನ್ನೂ ಕೇಳುವುದಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್ ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನು ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.