ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಎಸ್‍ಐ ಹಗರಣವನ್ನು (PSI Scam) ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ವಹಿಸಿದ್ದು, ಇದು ಕಾಂಗ್ರೆಸ್‍ನ (Congress) ದ್ವೇಷದ ರಾಜಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಪಿಎಸ್‍ಐ ಹಗರಣವನ್ನು ನಾವೇಸಿಐಡಿ ತನಿಖೆಗೆ ಆದೇಶ ಮಾಡಿದ್ದೆವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ. ಈ ಹಗರಣದಲ್ಲಿ ಕಾಂಗ್ರೆಸ್‍ನವರೂ ಇದ್ದಾರೆ. ಪ್ರಕರಣದ ತನಿಖೆ ನಡೆದು ಕೋರ್ಟ್‍ನಲ್ಲಿದೆ. ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರವಾಗಿದೆ. ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲಾ ತರಕಾರಿಗಳ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.