ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸದಾ ಚರ್ಚೆಯಲ್ಲಿರುವ ಮುಖ್ಯಮಂತ್ರಿ ಬದಲಾವಣೆ ಮತ್ತು ಕಾಂಗ್ರೆಸ್ ಅಧಿಕಾರದ ಅವಧಿಯ ಕುರಿತು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನಡುವೆ ಇಂದು ಸ್ವಾರಸ್ಯಕರ ಮಾತುಕತೆ, ಗಾದೆ ಮಾತುಗಳ ವಿನಿಮಯ ನಡೆಯಿತು.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ, “ನೀವೇ ಐದು ವರ್ಷ ಸಿಎಂ ಆಗಿ ಇರ್ತೀರಾ ಸರ್?” ಎಂದು ಪ್ರಶ್ನಿಸಿದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಮುಖ್ಯಮಂತ್ರಿಗಳು, “ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ” ಎಂದು ಸ್ಪಷ್ಟಪಡಿಸಿದರು.
ಕೃಷಿಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ನೀಡುವ ವಿಚಾರದಲ್ಲಿ ತಾರತಮ್ಯವಾಗಿದೆ ಎಂದು ಕುಣಿಗಲ್ ಶಾಸಕ ರಂಗನಾಥ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡುತ್ತಿದ್ದ ಸಿಎಂ, “ರಂಗನಾಥ್, ನಮ್ಮ ಮೇಲೆ ವಿಶ್ವಾಸ ಇಡಿ. ತಾರತಮ್ಯ ಆಗಿದ್ದರೆ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ” ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಅಶೋಕ್, “ತಾರತಮ್ಯ ಬೇಕು ಅಂತ ಮಾಡಿದ್ದಾರೆ” ಎಂದು ಕೆಣಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ನೀವು ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡ” ಎಂದು ಗಾದೆ ಮಾತಿನಲ್ಲಿ ಹೇಳಿದರು.
ತಕ್ಷಣವೇ ಈ ಅವಕಾಶ ಬಳಸಿಕೊಂಡ ಅಶೋಕ್, “ಹಾಗಾದ್ರೆ ಉರಿಯುತ್ತಿದೆಯಾ ನಿಮ್ಮಲ್ಲಿ?” ಎಂದು ಮರುಪ್ರಶ್ನಿಸಿ, ಕಾಂಗ್ರೆಸ್‌ನಲ್ಲಿರುವ ಸಿಎಂ ಕುರ್ಚಿಯ ಜಗಳಕ್ಕೆ ಟಾಂಗ್ ಕೊಟ್ಟರು. ಅದಕ್ಕೆ ಸಿಎಂ “ಅದು ಗಾದೆ ಕಣಯ್ಯ” ಎಂದು ಸ್ಪಷ್ಟನೆ ನೀಡಬೇಕಾಯಿತು.
ತಮ್ಮ ವಾದವನ್ನು ಮುಂದುವರೆಸಿದ ಅಶೋಕ್, ಕುಣಿಗಲ್ ರಂಗನಾಥ್ ಅವರು ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಪೂಜೆ, ಪುನಸ್ಕಾರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ರಂಗನಾಥ್ ಅವರು, “ಕ್ಷೇತ್ರಕ್ಕಾಗಿ ಪೂಜೆ ಮಾಡ್ತಿದ್ದೇನೆ” ಎಂದು ಸಮಜಾಯಿಸಿ ನೀಡಿದರು.
“ಮುಖ್ಯಮಂತ್ರಿಗಳು ಉರಿಯುತ್ತಿರೋದಕ್ಕೆ ತುಪ್ಪ ಹಾಕಬೇಡ ಅಂದ್ರು. ಅಂದರೆ ಜಗಳ ಹೊತ್ತಿ ಉರೀತಿದೆ ಅಂತ ಅರ್ಥ” ಎಂದು ಅಶೋಕ್ ಮತ್ತೆ ಟೀಕಿಸಿದರು.
“ಗಾದೆ ಅದು, ನಿಮಗೆ ಗಾದೆ ಗೊತ್ತಿಲ್ಲ ಅಂದ್ರೆ ಏನ್ಮಾಡೋದು” ಎಂದು ಸಿಎಂ ಪುನಃ ಸ್ಪಷ್ಟಪಡಿಸಿದರು. ಅಶೋಕ್ ಅವರು, “ಇನ್ನೊಂದ್ಸಲ ಗಾದೆ ಹೇಳಿ ಸರ್” ಎಂದು ಕೇಳಿದಾಗ, ಸಿಎಂ ಸಿದ್ದರಾಮಯ್ಯ, “ಆಂ, ಇನ್ನೊಂದ್ಸಲ ಹೇಳಲಾ? ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡಿ, ವಿಪಕ್ಷ ಇರೋದೇ ಉಪ್ಪು ಹಾಕೋದಿಕ್ಕೆ” ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.
“ನಾವು ಉಪ್ಪು ಹಾಕ್ತಿಲ್ಲ, ಅವರೇ ಹಾಕ್ತಿದ್ದಾರೆ” ಎಂದು ಅಶೋಕ್ ಸಮರ್ಥಿಸಿಕೊಂಡರು. ಕಡೆಗೆ, ಸಿಎಂ, “ವಿಪಕ್ಷದವ್ರು ನೀವು ಏನೇ ಪ್ರಚೋದನೆ, ಕಿತಾಪತಿ ಮಾಡಿದ್ರೂ ನಮ್ಮಲ್ಲಿ ಯಾರೂ ಪ್ರಚೋದನೆ ಆಗಲ್ಲ” ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ನಾಯಕತ್ವದ ಕಲಹವನ್ನು ವಿಪಕ್ಷಗಳು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

