ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಉತ್ತಮವಾಗಿ ಪ್ರಬಂಧ ಮಂಡಿಸುವ 10 ಮಂದಿ ಬಾಲವಿಜ್ಞಾನಿಗಳು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಹರ್ಷ ಅವರು ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುವ ಮೊದಲ 30 ತಂಡಗಳು ಡಿ.27 ರಿಂದ 31 ರವರೆಗೆ ಐದು ದಿನಗಳ ಕಾಲ ನಗರದಲ್ಲಿ ಗುಜರಾತ್‍ನ ಅಹ್ಮದಾಬಾದ್ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ 10-17 ವಯೋಮಾನದ ಮಕ್ಕಳಿಗಾಗಿ ಪಠ್ಯಕ್ರಮಕ್ಕೆ ಪೂರಕವಾದ ವಿಜ್ಞಾನ ಚಟುವಟಿಕೆಗಳಿಂದ ಕೂಡಿದ ಕಾರ್ಯಕ್ರಮವಾಗಿದೆ. ಈ ಸಮಾವೇಶವು ಮಕ್ಕಳಲ್ಲಿ ವಿಜ್ಞಾನ ಆಸಕ್ತಿ, ಕುತೂಹಲ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವುದರೊಂದಿಗೆ ಅವರಲ್ಲಿ ಸಂಶೋಧನಾ ಪ್ರವೃತ್ತಿ ಹಾಗೂ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಸೂಕ್ತ ವೇದಿಕೆ ಒದಗಿಸಲಿದೆ ಎಂದು ವಿಜ್ಞಾನ ಕಾರ್ಯಕ್ರಮದ ಸಂಘಟಕರೂ ಆದ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾಹಿತಿ ನೀಡಿದ್ದಾರೆ.
ಸಮಾವೇಶದ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ (ಮೊ: 9481431263), ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ.ಕೃಷ್ಣಚೈತನ್ಯ (ಮೊ:9449202055) ಅಥವಾ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ (ಮೊ.94485 88352) ಅವರನ್ನು ಸಂಪರ್ಕಿಸಬಹುದಾಗಿದೆ.
ನ.17ರಂದು ಕಾರ್ಯಾಗಾರ:
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ “ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ 30 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಪೂರ್ವಭಾಗಿಯಾಗಿ ನ. 17 ರಂದು ಬೆಳಗ್ಗೆ 9.45 ಗಂಟೆಗೆ ಮಡಿಕೇರಿಯ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಮಾರ್ಗದರ್ಶಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಮಡಿಕೇರಿ ನಗರದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು/ ಆಸಕ್ತ ಶಿಕ್ಷಕರಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ಸಮಾವೇಶದ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯದಡಿ ಮಕ್ಕಳಿಂದ ವೈಜ್ಞಾನಿಕ ಯೋಜನಾ ಪ್ರಬಂಧ ತಯಾರಿಸುವ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ