ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾದಿತ ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಬೀಜಿಂಗ್ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ಫಿಲಿಪೈನ್ಸ್ ರಕ್ಷಣಾ ಸಚಿವ ಗಿಲ್ಬರ್ಟೊ ಟಿಯೊಡೊರೊ ಜೂನಿಯರ್ ಮತ್ತು ಅವರ ಕುಟುಂಬದ ಮೇಲೆ ಚೀನಾ ಸರ್ಕಾರವು ಪ್ರಯಾಣ ನಿಷೇಧ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಚೀನಾದ ಈ ಕ್ರಮವನ್ನು ಫಿಲಿಪೈನ್ಸ್ ತೀವ್ರವಾಗಿ ಖಂಡಿಸಿದ್ದು, ಇದನ್ನು “ಸ್ನೇಹಪರವಲ್ಲದ ನಡವಳಿಕೆ” ಎಂದು ಕರೆದಿದೆ.
ಚೀನಾದ ಕಠಿಣ ಕ್ರಮಗಳು:
ಚೀನಾ ವಿದೇಶಾಂಗ ಸಚಿವಾಲಯದ ಪ್ರಕಟಣೆಯ ಪ್ರಕಾರ, ರಕ್ಷಣಾ ಸಚಿವ ಟಿಯೊಡೊರೊ ಚೀನಾದ ಹಿತಾಸಕ್ತಿಗಳ ವಿರುದ್ಧ “ಬೇಜವಾಬ್ದಾರಿ ಹೇಳಿಕೆ” ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಯೊಡೊರೊ ಮತ್ತು ಅವರ ಕುಟುಂಬಸ್ಥರು ಚೀನಾ, ಹಾಂಗ್ ಕಾಂಗ್ ಮತ್ತು ಮಕಾವೊ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಚೀನಾದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ರಕ್ಷಣಾ ಸಚಿವರ ಕುಟುಂಬದೊಂದಿಗೆ ಯಾವುದೇ ರೀತಿಯ ಆರ್ಥಿಕ ವಹಿವಾಟು ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಸತ್ಯ ನುಡಿಯುವವರನ್ನು ಹತ್ತಿಕ್ಕುವ ಪ್ರಯತ್ನ – ಫಿಲಿಪೈನ್ಸ್ ತಿರುಗೇಟು:
ಚೀನಾದ ಈ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಟಿಯೊಡೊರೊ, “ತಮ್ಮ ವಂಚನೆಯ ವಿರುದ್ಧ ಯಾರು ಸತ್ಯ ಮಾತನಾಡುತ್ತಾರೋ, ಅವರಿಗೆ ಚೀನಾ ಏನು ಮಾಡುತ್ತದೆ ಎಂಬುದನ್ನು ಈ ನಿರ್ಬಂಧಗಳು ತೋರಿಸುತ್ತವೆ. ಬೀಜಿಂಗ್‌ನ ಆಕ್ರಮಣದ ವಿರುದ್ಧ ನಮ್ಮ ದೇಶದ ಹಿತಾಸಕ್ತಿಗಳನ್ನು ರಕ್ಷಿಸುವುದನ್ನು ನಾನು ಮುಂದುವರಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದಾರೆ.
ವಿವಾದದ ಹಿನ್ನೆಲೆ:
ರಕ್ಷಣಾ ಸಚಿವ ಟಿಯೊಡೊರೊ ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕುಗಳನ್ನು “ದೊಡ್ಡ ಸುಳ್ಳು” ಎಂದು ಕರೆದಿದ್ದರು. ಅಲ್ಲದೆ ಚೀನಾದ ಆಕ್ರಮಣಶೀಲತೆಯನ್ನು ತಡೆಯಲು ಅಮೆರಿಕ, ಜಪಾನ್ ಮತ್ತು ಫ್ರಾನ್ಸ್‌ನಂತಹ ಮಿತ್ರರಾಷ್ಟ್ರಗಳೊಂದಿಗೆ ಫಿಲಿಪೈನ್ಸ್‌ನ ರಕ್ಷಣಾ ಮೈತ್ರಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಚೀನಾ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದೆ.



