ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ (America) ಮತ್ತು ಚೀನಾ (China) ನಡುವೆ ವಾಣಿಜ್ಯ ಯುದ್ಧ ತಾರಕ್ಕೇರಿದ್ದು, ಚೀನಾ ಅಮೆರಿಕದ ಸರಕುಗಳ ಆಮದುಗಳ ಮೇಲೆ ಶೇ. 84ರಷ್ಟು ಸುಂಕವನ್ನು ಘೋಷಿಸಿದೆ.
ಡೊನಾಲ್ಡ್ ಟ್ರಂಪ್ ಅವರ 104 ಪ್ರತಿಶತ ಸುಂಕಗಳಿಗೆ ಪ್ರತೀಕಾರವಾಗಿ ಅಮೆರಿಕದ ಎಲ್ಲಾ ಸರಕುಗಳ ಮೇಲೆ ಶೇ. 84 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಈ ಮೂಲಕ ಇಂದು ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧವು ಹೊಸ ಉತ್ತುಂಗಕ್ಕೇರಿದೆ. ಚೀನಾದ ಆಮದುಗಳ ಮೇಲೆ ಶೇ. 104ರಷ್ಟು ಸುಂಕವನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಶಾಕ್ ನೀಡಿದ್ದರು. ಅದಕ್ಕೆ ಇದೀಗ ಚೀನಾ ತಿರುಗೇಟು ನೀಡಿದೆ.
ಅಮೆರಿಕದ ಸರಕುಗಳ ಮೇಲಿನ ಬೀಜಿಂಗ್‌ನ ಪ್ರತೀಕಾರದ ಸುಂಕ ದರವು ಹಿಂದೆ ಘೋಷಿಸಲಾದ 34 ಪ್ರತಿಶತದಿಂದ ಹೆಚ್ಚಾಗಿದೆ. ಅಮೆರಿಕದ ಸರಕುಗಳ ಮೇಲೆ ಹೊಸದಾಗಿ ವಿಧಿಸಲಾದ ಸುಂಕಗಳು ಏಪ್ರಿಲ್ 10ರಿಂದ ಜಾರಿಗೆ ಬರಲಿವೆ ಎಂದು ಚೀನಾದ ಹಣಕಾಸು ಸಚಿವಾಲಯ ಘೋಷಿಸಿದೆ.
ಜೊತೆಗೆ ಚೀನಾದ ವಾಣಿಜ್ಯ ಸಚಿವಾಲಯವು 12 ಅಮೇರಿಕನ್ ಸಂಸ್ಥೆಗಳನ್ನು ತನ್ನ ರಫ್ತು ನಿಯಂತ್ರಣ ಪಟ್ಟಿಗೆ ಸೇರಿಸಿದೆ ಮತ್ತು 6 ಅಮೇರಿಕನ್ ಕಂಪನಿಗಳನ್ನು ತನ್ನ “ವಿಶ್ವಾಸಾರ್ಹವಲ್ಲದ ಘಟಕ”ದ ಪಟ್ಟಿಯ ಭಾಗವಾಗಿ ಗೊತ್ತುಪಡಿಸಿದೆ. ಏಪ್ರಿಲ್ 10ರಿಂದ ಅಮೆರಿಕದ ಸರಕುಗಳ ಮೇಲೆ ಈ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುವುದು ಎಂದು ಚೀನಾ ಹಣಕಾಸು ಸಚಿವಾಲಯ ತಿಳಿಸಿದೆ.