ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಸೋಂಕಿನ ಬಳಿಕ ಮಂದಗತಿಯಲ್ಲಿ ಸಾಗುತ್ತಿರುವ ಚೀನಾದ ಆರ್ಥಿಕತೆಯನ್ನು ಸುಧಾರಿಸಲು ಈಗ ಅಲ್ಲಿನ ಸರ್ಕಾರ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಯೋಜಿಸಿದೆ.
ದೇಶದ 14ನೇ ಪಂಚ ವಾರ್ಷಿಕ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಚೀನಾದ ಉನ್ನತ ಆರ್ಥಿಕ ಯೋಜನಾ ಸಂಸ್ಥೆ ಘೊಷಿಸಿದೆ.
ಚೀನಾದಲ್ಲಿ ಕೋವಿಡ್ ಬಿಕ್ಕಟ್ಟಿನಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ, ರಿಯಲ್ ಎಸ್ಟೇಟ್ ವಲಯದ ಕುಸಿತ ಸೇರಿ ಹಲವಾರು ಕ್ಷೇತ್ರಗಳು ಕುಸಿದಿದ್ದವು. ಇದರಿಂದ ಚೀನಾದ ಆರ್ಥಿಕತೆ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.4ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. 2022ರಲ್ಲಿ ಆರ್ಥಿಕತೆ ಶೇ.5ರಷ್ಟು ಬೆಳೆಯುತ್ತದೆ ಎಂದು ಸಂಸ್ಥೆ ಅಂದಾಜಿಸಿದೆ.
ಇನ್ನು ಚೀನಾ ಮೂಲಸೌಕರ್ಯ ಪೈಪ್ ಲೈನ್ ಸೇರಿ 102 ಮೆಗಾ ಯೋಜನೆಗಳ ಕಾರ್ಯಾರಂಭಿಸಲಿದೆ.
ದೇಶದ ಪ್ರಮುಖ ಯೋಜನೆಗಳಾದ ರಸ್ತೆ, ರೈಲ್ವೆ, ಸಾರಿಗೆ ವ್ಯವಸ್ಥೆ, ವಿಮಾನ ನಿಲ್ದಾಣ, ವಿದ್ಯುತ್ ಪೂರೈಕೆ, ಪೈಪ್ ಲೈನ್ ಸೇರಿ ಹಲವು ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಲಿದೆ.
ಈಗಾಗಲೇ ವಿಶ್ವದ ಹೈಸ್ಪೀಡ್ ರೈಲ್ವೆ ನೆಟ್ವರ್ಕ್ ಹೊಂದಿರುವ ಚೀನಾ 2025ರ ವೇಳೆಗೆ ಇದನ್ನು 50 ಸಾವಿರ ಕಿ.ಮೀ ವಿಸ್ತರಿಸಲು ಯೋಜಿಸಿದೆ. 2031ರ ವೇಳೆಗೆ ಇದನ್ನು ದ್ವಿಗುಣಗೊಳಿಸಿ 1 ಲಕ್ಷ ಕಿ.ಮೀ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದೆ.
ಇನ್ನು ರಾಷ್ಟ್ರದ ಬೆಳವಣಿಗೆಗೆ ಶಾಂಘೈ ನ ಸ್ಥಳೀಯ ಸರ್ಕಾರ ಹಡಗು ಹಾಗೂ ಸಾರ್ವಜನಿಕ ಸಾರಿಗೆ ಮೂಲಕ ನೀರಿನ ಸಂರಕ್ಷಣೆ, ಒಳಚರಂಡಿ ವ್ಯವಸ್ಥೆಗಳ ಕಾರ್ಯವನ್ನು ವೇಗಗೊಳಿಸಲಾಗುತ್ತದೆ ಎಂದಿದೆ.