ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ನಾಮಕರಣ: ವಾಸ್ತವ ಸಂಗತಿ ಬದಲಾಗಲ್ಲ ಎಂದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಅರುಣಾಚಲ ಪ್ರದೇಶದ (Arunachal Pradesh) ಹಲವು ಸ್ಥಳಗಳಿಗೆ ಮರುನಾಮಕರಣ ಮಾಡಿದ್ದ ಚೀನಾವನ್ನು (Chian) ಭಾರತ ತರಾಟೆಗೆ ತೆಗೆದುಗೊಂಡಿದೆ.

ಹೊಸ ಹೆಸರುಗಳನ್ನಿಡುವುದರಿಂದ ಅದು ಭಾರತದ ಅವಿಭಾಜ್ಯ ಅಂಗ ಎಂಬ ವಾಸ್ತವ ಸಂಗತಿ ಬದಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಹೇಳಿದೆ. ಅದೇ ವೇಳೆ ಚೀನಾದ ಕ್ರಮವನ್ನು “ಅರ್ಥಹೀನ” ಎಂದು ಕರೆದಿದೆ.

ಭಾರತದ ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುಹೆಸರಿಸಲು ಚೀನಾ ತನ್ನ ಅರ್ಥಹೀನ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ನಾವು ಅಂತಹ ಪ್ರಯತ್ನಗಳನ್ನು ಸರಾಸಗಟಾಗಿ ತಿರಸ್ಕರಿಸುತ್ತೇವೆ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವುದರಿಂದ ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ.

ವಿದೇಶಾಂಗ ವ್ಯವಹಾರ ಸಚಿವಾಲಯದ ಟ್ವೀಟ್
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗವೆಂದು ಬೀಜಿಂಗ್ ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಚೀನೀ ಹೆಸರು ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ.

ಚೀನಾದ ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಹೆಸರು ಬದಲಿಸುವುದರಿಂದ ದೇಶಕ್ಕೆ ಏನೂ ಲಾಭವಿಲ್ಲ ಎಂದು ಹೇಳಿದ್ದಾರೆ.

‘ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿತ್ತು, ಭಾರತದ ರಾಜ್ಯವಾಗಿದೆ ಮತ್ತು ಭವಿಷ್ಯದಲ್ಲಿ ಹಾಗೆಯೇ ಉಳಿಯುತ್ತದೆ, ಹೆಸರುಗಳನ್ನು ಬದಲಾಯಿಸುವುದರಿಂದ ಏನೂ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!