ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಚೀನಾದ ಬೆಳ್ಳುಳ್ಳಿ ಲಗ್ಗೆಯಿಟ್ಟಿದೆ. ನಿನ್ನೆಯಷ್ಟೇ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಬೆಳ್ಳುಳ್ಳಿ ಇದೀಗ ಉಡುಪಿಯ ಮಾರುಕಟ್ಟೆಯಲ್ಲಿಯೂ ಕಾಣಿಸಿದೆ.
ಉಡುಪಿಯ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ರೆಡಿಯಾಗಿರುವುದನ್ನು ನೋಡಿ ನಗರಸಭಾ ಆಯುಕ್ತರು ದಾಳಿ ಮಾಡಿ ಚೀನಾ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ಪತ್ತೆಯಾಗಿದ್ದು ಉಡುಪಿ ನಗರಸಭಾ ಆಯುಕ್ತ ರಾಯಪ್ಪ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
ದೇಶಿ ಹಾಗೂ ಚೀನಾ ಬೆಳ್ಳುಳ್ಳಿಯ ವ್ಯತ್ಯಾಸವನ್ನು ಭೌತಿಕ ರಚನೆಯಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಚೀನಾ ಬೆಳ್ಳುಳ್ಳಿಯ ಗಾತ್ರವು ಚಿಕ್ಕದಾಗಿದೆ. ಆದರೆ ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಚೀನಾ ಬೆಳ್ಳುಳ್ಳಿಯು ಪ್ರಕಾಶಮಾನವಾದ ಬಿಳಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ ದೇಶಿ ಬೆಳ್ಳುಳ್ಳಿಯ ಪದರವು ಅನೇಕ ಚುಕ್ಕೆಗಳನ್ನು ಹೊಂದಿವೆ. ಅದರ ಸಿಪ್ಪೆಯು ಬಿಳಿಯಿಂದ ಗುಲಾಬಿ ಅಥವಾ ತಿಳಿ ಕಂದು ಬಣ್ಣದ್ದಲ್ಲಿರುತ್ತದೆ.
ಇನ್ನು ಚೀನಾದ ಬೆಳ್ಳುಳ್ಳಿಯು ವಾಸನೆಯಲ್ಲಿ ಭಾರತೀಯ ಬೆಳ್ಳುಳ್ಳಿಗಿಂತ ಸ್ವಲ್ಪ ಭಿನ್ನವಾಗಿದೆ. ಚೀನಿ ಬೆಳ್ಳುಳ್ಳಿ ಕಟು ವಾಸನೆ ಇರದೆ ಪರಿಮಳ ಹೊಂದಿರುತ್ತದೆ. ಚೀನಾ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು. ಹೀಗಾಗಿ ಈ ಬೆಳ್ಳುಳ್ಳಿಯು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತದೆ. ಆದರೆ ಭಾರತೀಯ ಬೆಳ್ಳುಳ್ಳಿಯು ಸಣ್ಣ ಮತ್ತು ಉತ್ತಮವಾದ ಮೊಗ್ಗುಗಳನ್ನು ಹೊಂದಿರುತ್ತದೆ, ಇದರ ಸಿಪ್ಪೆ ಸುಲಿಯಲು ಸ್ವಲ್ಪ ಕಷ್ಟವಾಗಿದೆ.